ಮಡಿಕೇರಿ, ಅ. 26: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ತೀರ್ಮಾನವಾಗಿದ್ದ ಹಿನ್ನೆಲೆಯಲ್ಲಿ ಕರಗ ಹಾಗೂ ಮಂಟಪ ಸಮಿತಿಗಳಿಗೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಕರಗ ಉತ್ಸವವನ್ನು ಎರಡು ದಿನಕ್ಕೆ ಸೀಮಿತ ಗೊಳಿಸುವದರೊಂದಿಗೆ ವೈಭವದ ಮಂಟಪಗಳನ್ನು ರದ್ದುಗೊಳಿಸಿ, ಪಿಕ್‍ಅಪ್ ವಾಹನದಲ್ಲಿ ಕಲಶ ಹಾಗೂ ದೇವರ ಮೂರ್ತಿಯೊಂದನ್ನು ಅಳವಡಿಸಿ ಆದಷ್ಟು ಶೀಘ್ರ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ಸಾಂಪ್ರದಾಯಿಕವಾಗಿ ದಸರಾವನ್ನು ಆಚರಿಸಿ ಮುಗಿಸಲು ತೀರ್ಮಾನಿಸಲಾಗಿತ್ತು.

ಆದರೆ ವಿಜಯದಶಮಿಯಂದು ಮಡಿಕೇರಿ ನಗರದ ಹತ್ತು ಮಂಟಪಗಳ ಸಮಿತಿಗಳು ಪಿಕ್‍ಅಪ್ ವಾಹನಗಳಲ್ಲಿ ದೇವರÀ ಮೂರ್ತಿ ಪ್ರತಿಷ್ಠಾಪಿಸಿದ್ದವು ಕೆಲವು ಸಮಿತಿಗಳು ಸಣ್ಣ ಲೈಟಿಂಗ್ ಬೋರ್ಡ್ ಅಳವಡಿಸಿದ್ದರೆ, ಇನ್ನೂ ಕೆಲ ಮಂಟಪಗಳು ಆಕರ್ಷಕ ಮಂಟಪಗಳನ್ನು ಅಳವಡಿಸಿದ್ದವು. ಈ ಹಿನ್ನೆಲೆಯಲ್ಲಿ ದಶಮಂಟಪಗಳ ಸಮಿತಿ ಅಧ್ಯಕ್ಷ ಗುರುರಾಜ್ ಹಾಗೂ ಮಂಟಪ ಸಮಿತಿಗಳ ಪ್ರಮುಖರ ಸಭೆ ಕರೆದು, ಡಿವೈಎಸ್‍ಪಿ ದಿನೇಶ್‍ಕುಮಾರ್ ಮಡಿಕೇರಿ ನಗರಠಾಣೆಯಲ್ಲಿ ಸರ್ಕಾರದ ಆದೇಶದನ್ವಯ ಆಕರ್ಷಕ ಮಂಟಪ, ಲೈಟಿಂಗ್ ಬೋರ್ಡ್ ಅಳವಡಿಸು ವಂತಿಲ್ಲ. ಈ ಹಿಂದಿನ ತೀರ್ಮಾನ ದಂತೆ ಪಿಕ್‍ಅಪ್‍ನಲ್ಲಿ ಕಲಶ ಹಾಗೂ ದೇವರ ಮೂರ್ತಿಯೊಂದನ್ನಿಟ್ಟು ಸರಳವಾಗಿ ಆದಷ್ಟು ಶೀಘ್ರ ಬನ್ನಿ ಮಂಟಪಕ್ಕೆ ತೆರಳಿ ಆಚರಣೆಯನ್ನು ಮುಗಿಸಬೇಕು. ಲೈಟಿಂಗ್, ಮಂಟಪ ಇತ್ಯಾದಿಗಳಿಂದ ಜನಸಂದಣಿ ಹೆಚ್ಚಾಗಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಮಂಟಪಗಳಲ್ಲಿ 20 ಜನರನ್ನು ಹೊರತುಪಡಿಸಿ ಹೆಚ್ಚಿನ ಜನ ಸೇರುವಂತಿಲ್ಲ. ಲೈಟಿಂಗ್ ಬೋರ್ಡ್, ಮಂಟಪಗಳ ಅಳವಡಿಕೆ ಸರಿಯಲ್ಲ ಎಂದರಲ್ಲದೆ, ನಿಯಮ ಉಲ್ಲಂಘಿಸಿದರೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಚೌಡೇಶ್ವರಿ ಸಭಾಂಗಣದಲ್ಲಿ ಹತ್ತು ಮಂಟಪ ಸಮಿತಿಗಳ ಪ್ರಮುಖರ ಸಭೆ ಕರೆದಿದ್ದ ಅಧ್ಯಕ್ಷ ಗುರುರಾಜ್, ಪೊಲೀಸ್ ಸೂಚನೆ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು. ಬಳಿಕ ಈ ಬಗ್ಗೆ ಚರ್ಚೆ - ವಿಚರ್ಚೆ ನಡೆದ ನಂತರ ಈಗಾಗಲೇ ಮಾಡಲಾಗಿರುವ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಂಟಪ ಹಾಗೂ ಲೈಟಿಂಗ್ ಬೋರ್ಡ್ ಒಳಗೊಂಡು ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತ್ತಲ್ಲದೆ ಒಂದು ವೇಳೆ ಇದಕ್ಕೆ ಯಾವದೇ ಅಡ್ಡಿಗಳು ಎದುರಾದರೂ ಎಲ್ಲಾ ಮಂಟಪಗಳು ಒಟ್ಟಾಗಿ ಎದುರಿಸಲು ನಿರ್ಧರಿಸಲಾಯಿತು.

ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಅಧ್ಯಕ್ಷ ಗುರುರಾಜ್ ಕೊರೊನಾ ಹಿನ್ನೆಲೆಯಲ್ಲಿ ಆಡಂಬರವಿಲ್ಲದೆ, ಸರಳ ದಸರಾ ಆಚರಣೆಗೆ ದಶಮಂಟಪ ಸಮಿತಿ ಒಪ್ಪಿಗೆ ನೀಡಿದ್ದುದು ವಾಸ್ತವವಾದರೂ ಕೊರೊನಾ ಹೆಸರಿನಲ್ಲಿ ತೀರಾ ಕಳಾಹೀನವಾಗಿ ದೈವಿಕ ಆಚರಣೆ ಸರಿಯಲ್ಲ ಎಂಬ ಕಾರಣಕ್ಕಾಗಿ ಮಂಟಪ ಸಮಿತಿಗಳು ಸಣ್ಣಮಟ್ಟದ ಲೈಟಿಂಗ್ ಬೋರ್ಡ್, ಮಂಟಪಗಳನ್ನು ಅಳವಡಿಸಿವೆ ಹೊರತಾಗಿ ಜಿಲ್ಲಾಡಳಿತ, ಸರ್ಕಾರದ ನಿಯಮವನ್ನು ಉಲ್ಲಂಘಿಸುವ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದರು.