ಮಡಿಕೇರಿ, ಅ. 26: ಭಾರತವನ್ನು ಜಗತ್ತಿನ ಶ್ರೇಷ್ಠತಮ ರಾಷ್ಟ್ರವನ್ನಾಗಿ ರೂಪಿಸುವದರೊಂದಿಗೆ, ಪರಮ ವೈಭವ ಸ್ಥಿತಿಗೆ ಕೊಂಡೊಯ್ಯಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬದ್ಧವಿರುವದಾಗಿ, ಸಂಘದ ಜಿಲ್ಲಾ ಪ್ರಚಾರಕ್ ಶ್ರೀನಿಧಿ ಆಶಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಆರ್‍ಎಸ್‍ಎಸ್ ಕಾರ್ಯಾಲಯ ಮಧುಕೃಪಾದಲ್ಲಿ ಆಯೋಜಿಸಿದ್ದ ಸಂಘಟನೆಯ ಸಂಸ್ಥಾಪನಾ ದಿನಾಚರಣೆ ಹಾಗೂ ವಿಜಯದಶಮಿ ಉತ್ಸವದಲ್ಲಿ ಅವರು ಮಾತನಾಡುತ್ತಿದ್ದರು. ಕಳೆದ 95 ವರ್ಷಗಳಿಂದ ಹಿಂದೂ ಸಮಾಜದ ಏಕತೆ ಹಾಗೂ ರಾಷ್ಟ್ರದ ಸಾರ್ವಭೌಮತೆಗಾಗಿ ಶ್ರಮಿಸುತ್ತಿರುವ ಆರ್‍ಎಸ್‍ಎಸ್ ದೇಶಕ್ಕೆ ಸಂಕಷ್ಟ ಎದುರಾದ ಎಲ್ಲಾ ಸಂದರ್ಭಗಳಲ್ಲಿ ಸೇವೆಯ ರೂಪದಲ್ಲಿ ನೊಂದವರ ಕಣ್ಣೀರು ಒರೆಸಲು ಶ್ರಮಿಸುತ್ತಾ ಬಂದಿದೆ. ಇಂದಿನ ಜಾಗತಿಕ ಕೊರೊನಾ ನಡುವೆ ಕ್ಲಿಷ್ಟಕರ ಸನ್ನಿವೇಶದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ನೆನಪಿಸಿದರು.

ಮಡಿಕೇರಿ ನಗರ ಹಾಗೂ ಗ್ರಾಮೀಣ ಸ್ವಯಂ ಸೇವಕರು ಗಣವೇಷ ಧಾರಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೀತೆ, ಅಮೃತವಚನ ದೊಂದಿಗೆ ವಿಜಯದಶಮಿ ಸಂದೇಶ ಬಳಿಕ ಸಾಮೂಹಿಕ ಪ್ರಾರ್ಥನೆ ಯೊಂದಿಗೆ ಈ ಪ್ರಯುಕ್ತ ಸಿಹಿಯನ್ನು ಹಂಚಲಾಯಿತು. ಕೊರೊನಾ ಕಾರಣದಿಂದ ಈ ವರ್ಷ ನಗರ ಪಥಸಂಚಲನವನ್ನು ಕೈಬಿಡಲಾಯಿತು.