ಕೂಡಿಗೆ, ಅ. 27: ಅದಿವಾಸಿಗಳು ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಬೆಂಗಳೂರು ಬುಡಕಟ್ಟು ಕುರುಬ ಸಂಘರ್ಷ ಸಮಿತಿಯ ಅಧ್ಯಕ್ಷ ಮಂಜುನಾಥ ಲಕ್ಕವಳ್ಳಿ ಸಲಹೆಯಿತ್ತರು. ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಮತ್ತು ನ್ಯೂ ಇಂಡಿಯಾ ಗುಡ್ ಶೆಪರ್ಡ್ ಪೌಂಡೇಶನ್ ಮತ್ತು ಬುಡಕಟ್ಟು ಕುರುಬ ಸಂಘರ್ಷ ಸಮಿತಿ ಸಹಯೋಗದೊಂದಿಗೆ ನಡೆದ ಪರಿಶಿಷ್ಟ ಪಂಗಡದ ಗಿರಿಜನ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕುಶಾಲನಗರ ವಾಲ್ಮಿಕಿ ಭವನದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆ ಯನ್ನು ಬೆಂಗಳೂರಿನ ಬುಡಕಟ್ಟು ಸಮಾಜದ ಮುಖ್ಯಸ್ಥೆ ಭವ್ಯರೇವಣ್ಣ ನೆರವೇರಿಸಿ ಮಾತನಾಡಿ, ಅದಿವಾಸಿ ಕುಟುಂಬವರು ಶಿಕ್ಷಣದ ಮಹತ್ವವನ್ನು ತಿಳಿದುಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡ ಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಡಿ.ಆರ್. ಪ್ರಭಾಕರ್ ವಹಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಅರಣ್ಯ ಹಕ್ಕು ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಎಲ್ಲರೂ ಒಗ್ಗೂಡಿ ಶ್ರಮವಹಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಬೆಂಗಳೂರು ನ್ಯೂ ಇಂಡಿಯಾ ಗುಡ್ ಶೆಪರ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಸತ್ಯಪ್ಪ ಪರಸಪ್ಪ ಗುರಿಕಾರ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಬಸವಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಅರ್.ಕೆ. ಚಂದ್ರು, ರಾಜ್ಯ ಕುರುಬ ಸಂಘದ ನಿರ್ದೇಶಕಿ ಹೇಮಲತಾ, ಜಿಲ್ಲಾ ಸಂಗೊಳ್ಳಿ ರಾಯಣ್ಣ ವೇದಿಕೆಯ ಕಾರ್ಯದರ್ಶಿ ಮಂಜುನಾಥ ಸೇರಿದಂತೆ ಮೂರು ತಾಲೂಕಿನ ವಿವಿಧ ಘಟಕದ ಸಮಾಜದ ಮುಖಂಡರು ಹಾಗೂ ಸಂಘದ ವಿವಿಧ ಘಟಕಗಳ ಪದಾಧಿಕಾರಿಗಳು, ಇತರರು ಭಾಗವಹಿಸಿದರು.