ಕುಶಾಲನಗರ, ಅ. 26: ಕುಶಾಲನಗರ ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಕೆಲವು ಮಧ್ಯವರ್ತಿಗಳು ಅನವಶ್ಯಕವಾಗಿ ಗೊಂದಲ ಮೂಡಿಸುತ್ತಿದ್ದು ವಾರದ ಸಂತೆ ವರ್ತಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಕುಶಾಲನಗರ ಪ.ಪಂ. ಸದಸ್ಯರು ಹಾಗೂ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ. ಅಮೃತ್‍ರಾಜ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಈ ಹಿಂದಿನ ಸಂತೆ ನಡೆಯುತ್ತಿರುವ ಪ್ರದೇಶ ಅವೈಜ್ಞಾನಿಕವಾಗಿದ್ದು ಭಾರೀ ಪ್ರಮಾಣದ ವಿದ್ಯುತ್ ಹೈಟೆನ್ಷನ್ ಮಾರ್ಗದ ಕೆಳಗೆ ನಡೆಯುತ್ತಿತ್ತು. ಅಪಾಯಕಾರಿಯಾಗುವುದರ ಜೊತೆಗೆ ಮೂರು ವರ್ಷಗಳು ಸತತವಾಗಿ ಮುಳುಗಡೆ ಹೊಂದುತ್ತಿರುವ ಪ್ರದೇಶವಾಗಿದೆ. ಸ್ವಚ್ಛತೆಯ ಕೊರತೆ ಈ ಪ್ರದೇಶದಲ್ಲಿ ಇದ್ದು ಈ ಎಲ್ಲಾ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಮಾರ್ಗದರ್ಶನದಲ್ಲಿ ಸಂತೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಈ ಮಾರುಕಟ್ಟೆ ಪ್ರದೇಶಕ್ಕೆ ವಿದ್ಯುತ್ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಕೂಡ ನೀಡುವಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ್ದು ಯಾವುದೇ ಅನಾಹುತ ನಡೆದಲ್ಲಿ ಪಪಂ ಅಧಿಕಾರಿಗಳು ನೇರ ಹೊಣೆಯಾಗಬೇಕಾಗುತ್ತದೆ ಎಂದು ಲಿಖಿತ ಸೂಚನೆ ನೀಡಿದ್ದಾರೆ. ಅಪಾಯಕಾರಿ ಜಾಗದಿಂದ ಮಾರುಕಟ್ಟೆಯನ್ನು ವಿಶಾಲವಾದ ಆರ್‍ಎಂಸಿ ಆವರಣಕ್ಕೆ ಸ್ಥಳಾಂತರಿಸುವುದು ಉತ್ತಮ ನಿರ್ಧಾರವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಪ್ರಸ್ತುತ ಸಂತೆ ನಡೆಯುತ್ತಿರುವ ಆರ್‍ಎಂಸಿ ಆವರಣದಲ್ಲಿ ಸಂತೆ ಮಾಡಲು ಶಿಫಾರಸು ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.