ಮಡಿಕೇರಿ, ಅ. 26: ವಿಜಯದಶಮಿಗೂ ಮುನ್ನ ಆಚರಿಸಲ್ಪಡುವ ಸಂಪ್ರದಾಯಬದ್ಧ ಆಯುಧಾ ಪೂಜೆಯನ್ನು ಜಿಲ್ಲೆಯಾದ್ಯಂತ ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ. ವರ್ಷಂಪ್ರತಿ ಅದ್ಧೂರಿಯಿಂದ ವಿವಿಧ ಕಾರ್ಯಕ್ರಮ, ಸ್ಪರ್ಧೆ, ಮೆರವಣಿಗೆಗಳೊಂದಿಗೆ ಸಾರ್ವಜನಿಕವಾಗಿ ಆಚರಿಸಲ್ಪಡುತ್ತಿದ್ದ ಆಯುಧಾ ಪೂಜೆಯನ್ನು ಕೋವಿಡ್ ಹಿನ್ನೆಲೆ ಸರಳವಾಗಿ ಆಚರಿಸಲಾಯಿತು.

ಸಾಂಪ್ರದಾಯಿಕ ಆಯುಧಗಳಾದ ಕತ್ತಿ, ಕೋವಿ ಹಾಗೂ ಕೃಷಿಗೆ ಬಳಸುವ ಹತ್ಯಾರುಗಳಿಗೆ ಮನೆ-ಮನೆಗಳಲ್ಲಿ ಪೂಜೆ ಸಲ್ಲಿಸಲಾಯಿತು. ಇದರೊಂದಿಗೆ ವಾಹನಗಳಿಗೆ, ವರ್ಕ್‍ಶಾಪ್‍ಗಳು, ಅಂಗಡಿ-ಮಳಿಗೆಗಳು, ಕಚೇರಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡಿನ ಎಲ್ಲ ದೇವಾಲಯಗಳಲ್ಲೂ ಆಯುಧಾಪೂಜೆ ಪ್ರಯುಕ್ತ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರಿದವು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ವಿವಿಧೆಡೆ ಪೂಜಾ ಕಾರ್ಯಗಳು ನಡೆದವು.

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಆಯುಧ ಪೂಜೋತ್ಸವ ಸಂಭ್ರಮದಿಂದ ನಡೆಯಿತು. ಸಾರ್ವಜನಿಕರು ತಮ್ಮ ಮನೆ, ಕಚೇರಿ ಕೆಲಸದ ಸ್ಥಳಗಳಲ್ಲಿ ವಾಹನ, ಯಂತ್ರೋಪಕರಣ, ಆಯುಧಗಳಿಗೆ ಪೂಜೆ ಸಲ್ಲಿಸಿದರು. ಶನಿವಾರ ಸಂಜೆಯೇ ಪಟ್ಟಣದಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ಹೂವು, ಬೂದುಕುಂಬಳಕಾಯಿ, ಪೂಜೋತ್ಸವದ ಸಾಮಗ್ರಿಗಳ ಖರೀದಿಯ ಭರಾಟೆ ಜೋರಾಗಿತ್ತು.

ಆಯುಧ ಪೂಜೋತ್ಸವದ ಭಾನುವಾರದಂದು ಬೆಳಗ್ಗೆ 10 ಗಂಟೆಯ ವೇಳೆಗಾಗಲೇ ಪಟ್ಟಣದಲ್ಲಿನ ಹೂವಿನ ಅಂಗಡಿಗಳಲ್ಲಿ ಹೂವು ಖಾಲಿಯಾಗಿತ್ತು. ಬೆಳಿಗ್ಗೆ ಒಂದು ಮಾರು ಹೂವಿಗೆ 70 ರಿಂದ 80 ರೂಪಾಯಿ ದರವಿತ್ತು. 11 ಗಂಟೆಯ ವೇಳೆಗೆ ಹೂವು ಖಾಲಿಯಾಗುತ್ತಿದ್ದಂತೆ ಮತ್ತೆ ಹೂವನ್ನು ತರಿಸಿ ಒಂದು ಮಾರು ಸೇವಂತಿ ಹೂವನ್ನು 200 ರೂಪಾಯಿಯಂತೆ ಮಾರಾಟ ಮಾಡಲಾಯಿತು.

ಇದರೊಂದಿಗೆ ನಿನ್ನೆ ಬೆಳಗ್ಗೆಯೇ ಪಟ್ಟಣದಲ್ಲಿ ಬೂದುಕುಂಬಳಕಾಯಿ, ಸಿಹಿ ಬೂಂದಿ ಖಾಲಿಯಾಗಿತ್ತು. ಕೊರೊನಾ ಆತಂಕದ ನಡುವೆಯೂ ಸಾರ್ವಜನಿಕರು ಹಬ್ಬವನ್ನು ಸಂಭ್ರಮದಿಂದಲೇ ಆಚರಿಸಿದರು.

ಮಾಂಸ ಖರೀದಿ ಜೋರು: ಆಯುಧ ಪೂಜೋತ್ಸವ ಹಿನ್ನೆಲೆ ಪಟ್ಟಣದಲ್ಲಿ ಮದ್ಯ-ಮಾಂಸ ಖರೀದಿ ಜೋರಾಗಿತ್ತು. ಇಲ್ಲಿನ ಪ.ಪಂ. ವ್ಯಾಪ್ತಿಯ ಮಾರುಕಟ್ಟೆ ಹಾಗೂ ಆಲೇಕಟ್ಟೆ ರಸ್ತೆಯಲ್ಲಿರುವ ಮಾಂಸದಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.

ಮೋಟಾರ್‍ಯೂನಿಯನ್‍ನಿಂದ: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿಂದ ಪ್ರತಿ ವರ್ಷ ಆಯುಧ ಪೂಜೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಈ ಭಾಗದ ದಸರಾ ಜನೋತ್ಸವದಂತೆಯೇ ಮನ್ನಣೆ ಪಡೆದಿದ್ದ ಆಯುಧ ಪೂಜೋತ್ಸವ, ಈ ಬಾರಿ ಸರಳವಾಗಿ ನಡೆಯಿತು.

ಕೊರೊನಾ ವೈರಸ್ ಆತಂಕದ ಹಿನ್ನೆಲೆ ಅದ್ಧೂರಿಯ ಆಚರಣೆ ಬದಲಿಗೆ ಸರಳವಾಗಿ ಪೂಜೋತ್ಸವ ನಡೆಯಿತು. ವರ್ಕ್‍ಶಾಪ್‍ಗಳಲ್ಲಿ ವಿಶೇಷ ಪೂಜೆ ನಡೆಯಿತು. ಸಂಘದ ವತಿಯಿಂದ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ಸಂಘದ ಅಧ್ಯಕ್ಷ ಭರತ್, ಪದಾಧಿಕಾರಿಗಳಾದ ರಂಗಸ್ವಾಮಿ, ಪ್ರಮುಖರಾದ ಟಿ.ಕೆ. ರಮೇಶ್, ಎ.ಪಿ. ವೀರರಾಜು, ಇಸ್ಮಾಯಿಲ್, ಮಣಿ, ಸುಭಾಷ್ ತಿಮ್ಮಯ್ಯ, ಚಕ್ರವರ್ತಿ ಸುರೇಶ್, ಕಾಶಿ ಗೋಪಾಲ್, ಮಂಜು, ಎಸ್.ಎಂ. ಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುಂಟಿಕೊಪ್ಪದಲ್ಲಿ ಲೈಟ್ ರಹಿತ ಸರಳ ಆಯುಧ ಪೂಜೆ

ಸುಂಟಿಕೊಪ್ಪ: ಇಲ್ಲಿನ ಸುಂಟಿಕೊಪ್ಪÀ ವಾಹನ ಚಾಲಕರ ಸಂಘದ ವತಿಯಿಂದ ವರ್ಷಂಪ್ರತಿ ನಡೆಯುತ್ತಿದ್ದ ಅದ್ಧೂರಿಯ ಆಯುಧ ಪೂಜೆಗೆ ಈ ಬಾರಿ ಕೊರೊನಾ ಭೀತಿಯಿಂದ ಕಳೆಗುಂದಿ ಜನರಲ್ಲಿ ನಿರಾಶೆ ಮೂಡಿತು. ಕೇವಲ ಸಾಮೂಹಿಕ ವಾಹನ ಪೂಜೆ ಮತ್ತು ಕಚೇರಿಯ ಗಣಪತಿ ಹೋಮಕ್ಕೆ ಮಾತ್ರ ಸೀಮಿತವಾಯಿತು.

ಕಳೆದ 49 ವರ್ಷದಿಂದ ವಿದ್ಯುತ್ ದೀಪಗಳ ಅಲಂಕೃತ ವೇದಿಕೆಯಲ್ಲಿ ಆರ್ಕೆಷ್ಟ್ರಾ, ಸಭಾ ಕಾರ್ಯಕ್ರಮಗಳು ಅಲ್ಲದೇ ಅಂಗಡಿ ಮುಂಗಟ್ಟುಗಳ ಅಲಂಕಾರಗಳು ನಡೆಯುತ್ತಿತ್ತು. ಆದರೆ ಭಾನುವಾರ ಅಂತಹ ಸಂಭ್ರಮ ಕಂಡುಬರದೇ ಈ ವಾತಾವರಣ ಕತ್ತಲೆಯಿಂದ ಕೂಡಿದ್ದು ಸಂಗೀತ ಪ್ರೇಮಿಗಳಿಗೆ ಕೊರೊನಾ ಅಡ್ಡಿ ಪಡಿಸಿತು. ಸಂಘದ ಅಧ್ಯಕ್ಷ ಬಿ.ಎಂ.ಪೂವಪ್ಪ, ಅಚ್ಚುಪ್ಪ, ತಿಮ್ಮಪ್ಪ, ಕೃಷ್ಣಪ್ಪ,ಜಬ್ಬರ್, ಕಿಟ್ಟಣ್ಣ ಇತರರು ಇದ್ದರು.

ಆಟೋ ಚಾಲಕರ ಸಂಘದ ಆಯುಧಪೂಜೆ: ಇಲ್ಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಆಯುಧ ಪೂಜೆಯು ಅತೀ ಸರಳವಾಗಿ ಆಚರಿಸಲಾಯಿತು. ಕಚೇರಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯತು.

ಪೂಜೆಯ ಸಂದರ್ಭ ಸಂಘದ ಅಧ್ಯಕ್ಷ ಸಂತೋಷ್ ದಿನು, ಕಾರ್ಯದರ್ಶಿ ಬಿ.ಕೆ.ಪ್ರಶಾಂತ್‍ಕುಮಾರ್, ಸಹ ಕಾರ್ಯದರ್ಶಿ ಫೆಲಿಕ್ಸ್ ಡಿಸೋಜ, ಉಪಾಧ್ಯಕ್ಷರಾದ ನವಿತ್, ಸುನಿಲ್, ಗೌರವಾಧ್ಯಕ್ಷ ವಿಶ್ವನಾಥ, ಮೋಂತು ಡಿಸೋಜ,ಅಕ್ಬರ್ ಇತರರು ಇದ್ದರು.

ಅಲಂಕಾರವಿಲ್ಲದ ಸುಂಟಿಕೊಪ್ಪ: ಈ ಬಾರಿಯ ಆಯುಧ ಪೂಜೆಗೆ ಸುಂಟಿಕೊಪ್ಪ ಪಟ್ಟಣ ಯಾವುದೇ ಅಂಗಡಿ ವಾಹನಗಳ ಮಕ್ಕಳು ತಯಾರಿಸುವ ಮಂಟಪ ಅಲಂಕಾರವಿಲ್ಲದೇ ಬಿಕೋ ಎನ್ನುತ್ತಿತ್ತು. ಆದರೆ ಇಲ್ಲಿನ ಚೆಸ್ಕಾಂ ಇಲಾಖೆ ಮಾತ್ರ ಇಡೀ ಕಟ್ಟಡವನ್ನು ಅಲಂಕರಿಸಿ ಪೂಜೆಯನ್ನು ಸಂಭ್ರಮಿಸಿದ್ದು ವಿಶೇಷವಾಗಿತ್ತು.

ಶನಿವಾರಸಂತೆಯಲ್ಲಿ ಆಯುಧಪೂಜೆ

ಶನಿವಾರಸಂತೆ, ಅ. 26: ವಿವಿಧ ಕಡೆಗಳಲ್ಲಿ ಆಯುಧ ಪೂಜೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಈ ವರ್ಷ ಕೊರೊನಾ ಸೋಂಕು ದಿನೇದಿನೆ ಹರಡುತ್ತಿರುವುದ್ದರಿಂದ ಸರಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಪಾಲಿಸುವ ಇತಿಮಿತಿಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ.

ಆಯುಧಪೂಜೆಯನ್ನು ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಚರಿಸಲಾಯಿತು. ಕೊರೊನಾ ಸಮರ ಸೈನಿಕರಿಗೆ ವಿಶೇಷವಾಗಿ ಗೌರವ ನೀಡುವ ಮೂಲಕ ಆಯುಧಪೂಜೆಯನ್ನು ವಿಶಿಷ್ಠವಾಗಿ ಆಚರಣೆ ಮಾಡಲಾಯಿತು. ಆಸ್ಪತ್ರೆಯಲ್ಲಿ ವಾರಿಯರ್ ಬಗ್ಗೆ ಸಂದೇಶ ಸಾರುವ ಸೈನಿಕನ ಪ್ರತಿಕೃತಿಯೊಂದನ್ನು ರೂಪಿಸಿ ಗಮನ ಸೆಳೆಯಲಾಯಿತು.

ಬನ್ನಿಮಂಟಪದಲ್ಲಿ ವಿಶೇಷಪೂಜೆ

ಪಟ್ಟಣದ ಕೆಆರ್‍ಸಿ ವೃತ್ತದಲ್ಲಿರುವ ಬನ್ನಿಮಂಟಪದಲ್ಲಿ ಆಯುಧಪೂಜೆಯನ್ನು ಆಚರಿಸಲಾಯಿತು. ಸಾರ್ವಜನಿಕರು ಮತ್ತು ಭಕ್ತಾದಿಗಳು ಬೆಳಗ್ಗೆ ಬನ್ನಿಮಂಟಪಕ್ಕೆ ತೆರಳಿ ದೇವರ ವಿಗ್ರಹಗಳನ್ನು ಹೂವಿನಿಂದ ಅಲಂಕರಿಸಿದರು. ಭಕ್ತಾದಿಗಳು ಬನ್ನಿಮಂಟಪದ ದೇವರಿಗೆ ಹೂವು, ಹಣ್ಣು-ಕಾಯಿ ಅಭಿಷೇಕ ಸಲ್ಲಿಸಿ ಪೂಜಿಸಿದರು.

ನಾಪೆÇೀಕ್ಲುವಿನಲ್ಲಿ ಆಯುಧ ಪೂಜೆ

ನಾಪೆÇೀಕ್ಲು: ನಾಪೆÇೀಕ್ಲು ಪ್ರಾಥಮಿಕ ಶಾಲಾ ಮೈದಾನದಲ್ಲಿ ಇಲ್ಲಿನ ಶಿವಾಜಿ ತಂಡದ ವತಿಯಿಂದ ಆಯುಧ ಪೂಜೆಯನ್ನು ನೆರವೇರಿಸಲಾಯಿತು.