*ಗೋಣಿಕೊಪ್ಪಲು, ಅ. 27: ರಸ್ತೆಗಳ ಹೊಂಡ ಮುಚ್ಚಿಸಿ ಅಪಘಾತ ತಪ್ಪಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದು ರಸ್ತೆ ಬದಿಯಲ್ಲಿರುವ ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವುದು. ಆದರೆ ಕೇವಲ ರಸ್ತೆಗಳನ್ನು ಡಾಂಬಾರು ಹಾಕಿ ನುಣ್ಣಗೆ ಮಾಡುವ ಗುತ್ತಿಗೆದಾರರು ರಸ್ತೆ ಬದಿಯಲ್ಲಿನ ಗಿಡ ಗಂಟಿಗಳನ್ನು ಕಡಿದು ಸ್ವಚ್ಛಮಾಡುವ ಮೂಲಕ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಇದರಿಂದ ರಸ್ತೆ ಬದಿಯಲ್ಲಿ ನಡೆದಾಡುವ ಪಾದಚಾರಿಗಳು ವಾಹನಗಳಿಂದ ಅಪಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇಂತಹ ಸ್ಥಿತಿ ತಿತಿಮತಿ, ಕೋಣನಕಟ್ಟೆ ಮಾರ್ಗದ್ದಾಗಿದೆ. ತಿತಿಮತಿಯಿಂದ ಕೋಣನಕಟ್ಟೆ ವರೆಗೆ ಮೂರು ವರ್ಷಗಳ ಹಿಂದೆ ರಸ್ತೆ ಡಾಂಬರೀಕರಣ ಮಾಡಲಾಯಿತು. ರಸ್ತೆಗೆ ಡಾಂಬಾರು ಹಾಕಿ ನುಣ್ಣಗೆ ಮಾಡಲಾಯಿತು. ಆದರೆ ರಸ್ತೆ ಬದಿಯನ್ನು ಮಾತ್ರ ಸ್ವಚ್ಛಗೊಳಿಸಲಿಲ್ಲ. ಇದರಿಂದ ಈ ಭಾಗದಲ್ಲಿ ನಡೆದಾಡುವ ಜನರು ಆಗ್ಗಾಗ್ಗೆ ಅಪಘಾತಕ್ಕೆ ಒಳಗಾಗುವ ಸ್ಥಿತಿ ಎದುರಾಗಿದೆ.

ತಿತಿಮತಿ, ಕೋಣನಕಟ್ಟೆವರೆಗಿನ 7 ಕಿ.ಮೀ. ರಸ್ತೆಯ ಒಂದು ಬದಿಯಲ್ಲಿ ನಾಗರಹೊಳೆ ಅರಣ್ಯವಿದ್ದರೆ ಮತ್ತೊಂದು ಬದಿಯಲ್ಲಿ ಕಾಫಿ ತೋಟವಿದೆ. ಈ ರಸ್ತೆ ಬಹಳಷ್ಟು ತಿರುವಿನಿಂದ ಕೂಡಿದೆ. ಈ ಭಾಗದಲ್ಲಿ ವಾಸಿಸುತ್ತಿರುವವರಲ್ಲಿ ಶೇ. 75 ರಷ್ಟು ಜನ ಬುಡಕಟ್ಟು ಜನಾಂಗದ ಕೂಲಿ ಕಾರ್ಮಿಕರೇ ಆಗಿದ್ದಾರೆ. ಇವರೆಲ್ಲ ಕಾಫಿ ತೋಟದಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಹಾಡಿಯ ಮನೆಗಳಿಗೆ ತೆರಳಬೇಕಾದರೆ ರಸ್ತೆ ಬದಿಯಲ್ಲಿ ನಡೆದುಕೊಂಡೇ ಹೋಗಬೇಕು. ಆದರೆ ಇವರು ನಡೆದಾಡುವುದಕ್ಕೆ ಪಾದಚಾರಿ ರಸ್ತೆಯಿಲ್ಲ. ರಸ್ತೆ ಬದಿಯಲ್ಲಿ ಬಹಳಷ್ಟು ಗಿಡಗಂಟಿಗಳು ಬೆಳೆದು ರಸ್ತೆಯನ್ನೇ ಮುಚ್ಚಿ ಹಾಕಿದೆ. ಆದ್ದರಿಂದ ಬೇರೆ ದಾರಿಯಿಲ್ಲದೆ ಪಾದಚಾರಿಗಳು ವಾಹನಗಳು ಓಡಾಡುವ ರಸ್ತೆಯಲ್ಲಿಯೇ ಓಡಾಡಬೇಕಾದ ಅನಿವಾರ್ಯತೆ ಇದೆ. ತಿರುವಿನಲ್ಲಿ ಬಂದ ವಾಹನಗಳು ಪಾದಚಾರಿಗಳಿಗೆ ಕಾಣುವುದೇ ಇಲ್ಲ. ಇದರಿಂದ ಬಹಳಷ್ಟು ಅಪಘಾತಗಳಾಗಿವೆ ಎಂದು ಈ ವ್ಯಾಪ್ತಿಯ ಬಹಳಷ್ಟು ಕೂಲಿ ಕಾರ್ಮಿಕ ಬುಡಕಟ್ಟು ಜನರು ದೂರಿದ್ದಾರೆ.

ರಸ್ತೆ ಬದಿ ಸ್ವಚ್ಛಗೊಳಿಸಲು ಒತ್ತಾಯ

ರಸ್ತೆ ಬದಿಯಲ್ಲಿ ಕಾಡು ಬೆಳೆದು ಆನೆಗಳು ನಿಂತಿದ್ದರೂ ಕಾಣುವುದಿಲ್ಲ. ಇದರಿಂದ ಕೂಲಿ ಕಾರ್ಮಿಕರ ಜೀವಕ್ಕೆ ತೊಂದರೆಯಾಗಿದೆ. ಆದಷ್ಟು ಬೇಗ ಇದನ್ನು ಸ್ವಚ್ಛಗೊಳಿಸುವಂತೆ ನೋಕ್ಯದ ಕಾಫಿ ಬೆಳೆಗಾರ ಹಾಗೂ ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಚೆಪ್ಪುಡೀರ ಕಾರ್ಯಪ್ಪ ಒತ್ತಾಯಿಸಿದ್ದಾರೆ.

- ಎನ್.ಎನ್. ದಿನೇಶ್