ಚೀನಾ ಬೆದರಿಕೆಗೆ ಭಾರತ-ಅಮೇರಿಕಾ ಸೆಡ್ಡು

ನವದೆಹಲಿ, ಅ. 27: ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ, ವರ್ಗೀಕೃತ ಉಪಗ್ರಹ ದತ್ತಾಂಶ ಮತ್ತು ಸೂಕ್ಷ್ಮ ಮಾಹಿತಿಗಳ ವಿನಿಮಯ ಇಂದಿನ ಭಾರತ-ಅಮೇರಿಕಾ 2+2 ಮಾತುಕತೆ ನಂತರ ಮಾಡಿಕೊಂಡ ರಕ್ಷಣಾ ಒಪ್ಪಂದಗಳಾಗಿವೆ. ಇಂದು ಬೆಳಗ್ಗೆಯಿಂದ ನಡೆದ ಮಾತುಕತೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಮೇರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪೆÇಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಜೊತೆಗೆ ಮಾತುಕತೆ ನಡೆಸಿ ಜಂಟಿ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದರು. ಎರಡೂ ದೇಶಗಳ ಮಿಲಿಟರಿ ಮತ್ತು ರಕ್ಷಣಾ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎರಡೂ ದೇಶಗಳ ನಡುವಣ ಮಿಲಿಟರಿ ಸಂಬಂಧ, ಸಹಕಾರ ವೃದ್ಧಿಯಾಗುತ್ತಿದೆ. ಎರಡು ದಿನಗಳ ಸಭೆಯಲ್ಲಿ, ಮೂರನೇ ನೆರೆ ರಾಷ್ಟ್ರಗಳೊಂದಿಗೆ ಅಥವಾ ಬೇರೆ ದೇಶಗಳ ಮುಂದೆ ನಮ್ಮ ಜಂಟಿ ಸಹಕಾರ ಚಟುವಟಿಕೆಗಳು ಮತ್ತು ಇತರ ಸಾಮಥ್ರ್ಯಗಳ ಹೆಚ್ಚಿಸುವಿಕೆಗೆ ಇರುವ ಸಾಧ್ಯತೆಗಳ ಕುರಿತು ಚರ್ಚಿಸಿದವು. ಕಾನೂನುಗಳನ್ನು ಗೌರವಿಸಿ ಮತ್ತು ಅಂತರರಾಷ್ಟ್ರೀಯ ಸಾಗರಗಳಲ್ಲಿ ನೌಕಾ ಚಟುವಟಿಕೆಗಳಿಗೆ ಸ್ವಾತಂತ್ರ್ಯವನ್ನು ವಿಸ್ತರಿಸಲು, ಪ್ರಾಂತೀಯ ಸಮಗ್ರತೆ ಮತ್ತು ಎಲ್ಲಾ ದೇಶಗಳ ಸಾರ್ವಭೌಮತೆಗಳನ್ನು ಎತ್ತಿಹಿಡಿಯುವುದು ಅಗತ್ಯವಾಗಿದ್ದು, ಅದಕ್ಕೆ ಉಭಯ ದೇಶಗಳು ಪರಸ್ಪರ ಒಪ್ಪಿಗೆ ಸೂಚಿಸಿವೆ ಎಂದರು. ಅಮೇರಿಕಾ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮಾತನಾಡಿ, ಜಗತ್ತಿನಲ್ಲಿ ಕೊರೊನಾ ವೈರಸ್ ಸೋಂಕು ಮತ್ತು ಹಲವು ಭದ್ರತಾ ಸವಾಲುಗಳು ಎದುರಾಗಿರುವ ಸಮಯದಲ್ಲಿ, ಭಾರತ-ಅಮೇರಿಕಾ ನಡುವಣ ಸಹಭಾಗಿತ್ವ ಭದ್ರತೆ, ಸ್ಥಿರತೆ ಮತ್ತು ಸಮೃದ್ಧತೆ ದೃಷ್ಟಿಯಿಂದ ಅಗತ್ಯವಾಗಿದೆ. ನಮ್ಮ ಹಂಚಿಕೆಯ ಮೌಲ್ಯಗಳು ಮತ್ತು ಸಾಮಾನ್ಯ ಹಿತಾಸಕ್ತಿಗಳ ಮಧ್ಯೆ ಮುಕ್ತ ಮತ್ತು ನಿರ್ಭೀತ ಇಂಡೊ-ಫೆಸಿಫಿಕ್ ಸಹಕಾರಕ್ಕೆ ಹೆಗಲು ಕೊಟ್ಟು ನಿಲ್ಲಲಿದ್ದೇವೆ, ಚೀನಾದ ಕಡೆಯಿಂದ ಗಡಿಭಾಗದಲ್ಲಿ ಮಿಲಿಟರಿ ಚಟುವಟಿಕೆ, ನಮ್ಮನ್ನು ಅಸ್ಥಿರ ಮಾಡುವ ಪ್ರಯತ್ನಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಇದು ಅನಿವಾರ್ಯವಾಗಿದೆ ಎಂದರು. ಅಮೇರಿಕಾ ರಾಜ್ಯ ಕಾರ್ಯದರ್ಶಿ ಮೈಕ್ ಪೆÇಂಪಿಯೊ ಮಾತನಾಡಿ, ಚೀನಾ ಸರ್ಕಾರ ಸೇರಿದಂತೆ ಎಲ್ಲಾ ರೀತಿಯ ಬೆದರಿಕೆಗಳ ವಿರುದ್ಧ ನಮ್ಮ ಸಹಕಾರವನ್ನು ವೃದ್ಧಿಸಲು ಭಾರತ ಮತ್ತು ಅಮೆರಿಕ ಕ್ರಮಕ್ಕೆ ಮುಂದಾಗಿವೆ. ಕಳೆದ ವರ್ಷದ ಮಾತುಕತೆಯಲ್ಲಿ ನಾವು ಸೈಬರ್ ವಿಷಯಗಳಲ್ಲಿ ನಮ್ಮ ಸಹಕಾರವನ್ನು ವೃದ್ಧಿಸಿಕೊಂಡಿದ್ದೇವೆ ಎಂದರು.

ವಿದ್ಯಾರ್ಥಿನಿಗೆ ಗುಂಡಿಕ್ಕಿ ಹತ್ಯೆ

ಹೊಸದಿಲ್ಲಿ, ಅ. 27: ಫರಿದಾಬಾದ್‍ನಲ್ಲಿ ಸೋಮವಾರ 20 ರ ಹರೆಯದ ಕಾಲೇಜು ವಿದ್ಯಾರ್ಥಿನಿಯನ್ನು ಆಕೆಯ ಕಾಲೇಜಿನ ಹೊರಗೆ ಹಾಡಹಗಲೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ 3.45 ರ ಸುಮಾರಿಗೆ ಬಲ್ಲಾಬ್‍ಘರ್ ಪ್ರದೇಶದಲ್ಲಿ ನಿಕಿತಾ ತೋಮರ್ ಎಂಬ ಯುವತಿ ಪರೀಕ್ಷೆಗೆ ಹಾಜರಾಗಿ ಕಾಲೇಜಿನಿಂದ ಹೊರಬರುತ್ತಿರುವಾಗ ಈ ಘಟನೆ ನಡೆದಿದೆ. ನಿಕಿತಾ ಅಂತಿಮ ವರ್ಷದ ಬಿಕಾಂ ಪದವಿ ಓದುತ್ತಿದ್ದಳು. ನಿಕಿತಾ ತನ್ನ ಸ್ನೇಹಿತೆಯರೊಂದಿಗೆ ಅಗರ್‍ವಾಲ್ ಕಾಲೇಜಿನಿಂದ ಹೊರ ಬರುತ್ತಿದ್ದಂತೆ ಐ 20 ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯುವತಿಯನ್ನು ಕಾರಿನೊಳಗೆ ಸೆಳೆಯಲು ಯತ್ನಿಸಿದ್ದು, ಯುವತಿ ಇಬ್ಬರಿಗೂ ಎಚ್ಚರಿಕೆ ನೀಡಿದ್ದು, ಆಗ ದುಷ್ಕರ್ಮಿಗಳು ಯುವತಿಯ ಎದೆಗೆ ಗುಂಡು ಹಾರಿಸಿದ್ದಾರೆ. ಯುವತಿ ತೀವ್ರ ರಕ್ತಸ್ರಾವದಿಂದಾಗಿ ಕೆಳಗೆ ಬಿದ್ದಿದ್ದಾಳೆ. ಬಳಿಕ ಇಬ್ಬರು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವತಿಗೆ ಗುಂಡಿಕ್ಕಿರುವ ಆರೋಪಿ ತೌಫೀಕ್, ನಿಕಿತಾ ತೋಮರ್‍ನೊಂದಿಗೆ 10ನೇ ತರಗತಿಯ ತನಕ ಒಟ್ಟಿಗೆ ಅಧ್ಯಯನ ಮಾಡಿದ್ದ. ಇಬ್ಬರು ಪರಸ್ಪರ ಪರಿಚಿತರಾಗಿದ್ದು, 2018 ರಲ್ಲಿ ನಿಕಿತಾಳನ್ನು ಅಪಹರಿಸಿದ್ದ ಎಂದು ಮೂಲಗಳು ತಿಳಿಸಿವೆ. ಅಪಹರಣ ಘಟನೆಯ ವೇಳೆ ಯುವತಿಯ ಕುಟುಂಬ ಮೊದಲಿಗೆ ಎಫ್‍ಐಆರ್ ದಾಖಲಿಸಿತ್ತು. ನಂತರ ಸಾಮಾಜಿಕ ಕಳಂಕದ ಭೀತಿಯಿಂದ, ಮಗಳ ಹೆಸರನ್ನು ಉಳಿಸುವ ಉದ್ದೇಶದಿಂದ ಪ್ರಕರಣ ಹಿಂಪಡೆದುಕೊಂಡಿತ್ತು. ಆದರೆ ಆರೋಪಿ ಮಾತ್ರ ಯುವತಿಗೆ ಕಿರುಕುಳವನ್ನು ನೀಡುತ್ತಲೇ ಇದ್ದ ಎನ್ನಲಾಗಿದೆ. ನಿಕಿತಾ ಸೆಕ್ಟರ್ 23 ರಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಪೊಲೀಸರು ಕೃತ್ಯ ನಡೆಸಿರುವ ಎರಡನೇ ಆರೋಪಿಯ ಶೋಧ ನಡೆಸುತ್ತಿದ್ದಾರೆ.

ಚಕ್ರ ಬಡ್ಡಿ ಮನ್ನಾ ಯೋಜನೆ

ಮುಂಬೈ, ಅ. 27: ಲಾಕ್‍ಡೌನ್‍ಅವಧಿಯಲ್ಲಿ ಸಾಲಗಾರರ ಚಕ್ರ ಬಡ್ಡಿ ಮನ್ನಾ ಮಾಡುವ ಸರ್ಕಾರದ ಯೋಜನೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಜೊತೆಗೆ, ಎಲ್ಲಾ ಸಾಲ ನೀಡುವ ಸಂಸ್ಥೆಗಳಿಗೆ ನಿಗದಿತ ಸಮಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆರ್‍ಬಿಐ ಸೂಚನೆ ನೀಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಆರ್‍ಬಿಐ, ಸರ್ಕಾರ ಅಕ್ಟೋಬರ್ 23, 2020 ರಂದು ನಿಗದಿತ ಸಾಲ ಖಾತೆಗಳಲ್ಲಿ (2020 ಮಾ.1 ರಿಂದ ಆ.31) ಸಾಲಗಾರರಿಗೆ ಆರು ತಿಂಗಳ ಕಾಲ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸವನ್ನು ಎಕ್ಸ್-ಗ್ರೇಷಿಯಾ ಪಾವತಿ ನೀಡುವ ಯೋಜನೆ ಪ್ರಕಟಿಸಿದೆ. ಇದರ ಅನುಸಾರ ಮಾ. 1 ರಿಂದ ಆ. 31 ರವರೆಗಿನ ಅವಧಿಗೆ ಆಯಾ ಸಾಲ ನೀಡುವ ಸಂಸ್ಥೆಗಳಿಂದ ಸರಳ ಬಡ್ಡಿ ಮತ್ತು ಸಂಯುಕ್ತ ಬಡ್ಡಿ ನಡುವಿನ ವ್ಯತ್ಯಾಸವನ್ನು ಜಮಾ ಮಾಡುವ ಮೂಲಕ ಕೆಲವು ವರ್ಗದ ಸಾಲಗಾರರಿಗೆ ಎಕ್ಸ್-ಗ್ರೇಷಿಯಾ ಪಾವತಿ ಕಡ್ಡಾಯಗೊಳಿಸುತ್ತದೆ ಎಂದಿದೆ.

ಕಿರುತೆರೆ ನಟಿಗೆ ಚೂರಿ ಇರಿತ

ಮುಂಬೈ, ಅ. 27: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಕಿರುತೆರೆ ನಟಿಗೆ ಚೂರಿ ಇರಿದು ಪರಾರಿಯಾಗಿದ್ದಾನೆ. ಮುಂಬೈನ ಅಂಧೇರಿಯಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆಸಿದೆ. ಕಿರುತೆರೆ ನಟಿ ಮಾಲ್ವಿ ಮಲ್ಹೋತ್ರಾ ಅವರು ಕೇಫೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಮಾರ್ಗ ಮಧ್ಯೆ ಅಡ್ಡಹಾಕಿದ ಯೋಗೇಶ್ ಮಹಿಪಾಲ್ ಸಿಂಗ್ ತನ್ನನ್ನು ದೂರ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾನೆ. ಮದುವೆಯಾಗುವಂತೆ ಬೇಡಿಕೆಯಿಟ್ಟು ಅದಕ್ಕೆ ಒಪ್ಪದಿದ್ದಕ್ಕೆ ತನ್ನ ಬಳಿಯಿದ್ದ ಚೂರಿಯಿಂದ ಮಾಲ್ವಿಗೆ ಇರಿದಿದ್ದಾನೆ. ಮಾಲ್ವಿಯ ಕೈಗಳಿಗೆ ಚೂರಿ ಇರಿತವಾಗಿ ರಕ್ತ ಸೇರುತ್ತಿತ್ತು. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ನ. 30 ರವರೆಗೆ ಮುಂದುವರೆಯಲಿದೆ ಅನ್‍ಲಾಕ್ 5.0

ನವದೆಹಲಿ, ಅ. 27: ಅನ್‍ಲಾಕ್ 5.0 ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದ್ದು, ಅದನ್ನು ಅ. 30 ರವರೆಗೆ ಮಾತ್ರ ಈ ಮೊದಲು ನಿಗದಿ ಗೊಳಿಸಿದ್ದು, ಅದನ್ನು ಇನ್ನೂ ಒಂದು ತಿಂಗಳು ಕಾಲ ಮುಂದೂಡಿದೆ. ಈ ಬಗ್ಗೆ ತಾ. 27 ರಂದು ಕೇಂದ್ರ ಸರ್ಕಾರ ಪರಿಷ್ಕøತ ಮಾರ್ಗಸೂಚಿ ಪ್ರಕಟಿಸಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಅ. 30 ರವರೆಗೆ ಮಾತ್ರ ಚಿತ್ರಮಂದಿರ, ಸಾಮಾಜಿಕ ಸಮಾರಂಭಕ್ಕೆ ಜನರ ಮಿತಿ ಇತರ ಕೊರೊನಾ ಮಾರ್ಗಸೂಚಿ ಪ್ರಕಟಿಸಿದ್ದು, ಅದೇ ನಿಯಮವನ್ನು ಇದೀಗ ನ. 30 ರವರೆಗೂ ವಿಸ್ತರಿಸಿ ಆದೇಶ ನೀಡಿದೆ. ಹೀಗಾಗಿ ಅನ್‍ಲಾಕ್ 5.0 ತಾ. 30 ರಂದು ಮುಕ್ತಾಯಗೊಳ್ಳುವುದಿಲ್ಲ. ನ. 30 ರವರೆಗೆ ವಿಸ್ತರಣೆಗೊಳ್ಳಲಿದೆ.