ಕಣಿವೆ, ಅ. 26: ಮುಂಬರುವ ಫೆಬ್ರವರಿ 7 ರಿಂದ 12 ರವರೆಗೆ ಬೆಂಗಳೂರಿನಲ್ಲಿ ನಡೆಯುವ ಭಾರತೀಯ ಸೇನಾ ನೇಮಕಾತಿಗೆ ಯುವಕರನ್ನು ಸಜ್ಜುಗೊಳಿಸುವ ಸಂಬಂಧ ಕುಶಾಲನಗರದಲ್ಲಿ ಉಚಿತವಾಗಿ ಸೇನಾ ತರಬೇತಿ ನೀಡಲಾಗುತ್ತಿದೆ.
ಕೊಡಗು ಎಜುಕೇಷನ್ ಅಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್ ವತಿಯಿಂದ ಕಳೆದ ಹಲವು ವರ್ಷಗಳಿಂದ ನಡೆಸುತ್ತಿರುವ ಉಚಿತ ಸೇನಾ ನೇಮಕಾತಿ ತರಬೇತಿಯನ್ನು ನಿವೃತ್ತ ಯೋಧ ಹವಾಲ್ದಾರ್ ಅಮೆ ಜನಾರ್ಧನ್ ನೀಡುತ್ತಿದ್ದಾರೆ. ಕೊಡಗು ಸೇರಿದಂತೆ ಸುತ್ತಲಿನ ಹಾಸನ, ಮೈಸೂರು ಜಿಲ್ಲೆಗಳ ಸುಮಾರು 25 ಯುವಕ-ಯುವತಿಯರು ಸೇನಾ ತರಬೇತಿ ಪಡೆಯುತ್ತಿದ್ದಾರೆ.
ಇವರಿಗೆ ಕುಶಾಲನಗರದ ವಿವಿಧೆಡೆಗಳಲ್ಲಿ ಮೂರರಿಂದ ನಾಲ್ಕು ಕಿ.ಮೀ. ಓಟ, ಉದ್ದಜಿಗಿತ, ಪುಲ್ಲಪ್, ವ್ಯಾಯಾಮ, ಯೋಗ ಸೇರಿದಂತೆ ಹಲವು ಕಸರತ್ತುಗಳನ್ನು ಕಲಿಸಲಾಗುತ್ತಿದೆ ಎಂದು ಅಮೆ ಜನಾರ್ಧನ್ ತಿಳಿಸಿದ್ದಾರೆ.
ಅಲ್ಲದೆ ಸೇನಾ ನೇಮಕಾತಿಗೆ ಪ್ರಮುಖವಾಗಿ ನಡೆಯುವ ಲಿಖಿತ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸಂಪನ್ಮೂಲ ವ್ಯಕ್ತಿಗಳಿಂದ ಕಲಿಸಿಕೊಡಲಾಗುತ್ತಿದೆ ಎಂದ ಅವರು, ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಮಾಡುತ್ತಿರುವ ಸಂಪೂರ್ಣ ಉಚಿತವಾದ ತರಬೇತಿ ಕಾರ್ಯಾಗಾರದಲ್ಲಿ ಇದುವರೆಗೂ 125 ಮಂದಿ ಯುವಕರು ಸೇನೆಗೆ ಆಯ್ಕೆಯಾಗಿರುವುದು ನಮ್ಮ ಸಂಸ್ಥೆಯ ಮತ್ತು ನಮ್ಮ ತಂಡದ ಹೆಮ್ಮೆ ಎಂದು ಹೇಳಿದ್ದಾರೆ.