ಮಡಿಕೇರಿ, ಅ. 26: ಮಡಿಕೇರಿ ದಸರಾ ಎಂದ ಕೂಡಲೇ ಕಣ್ಮುಂದೆ ಬರುವದು ಅತ್ಯಾಕರ್ಷಕ ಮಂಟಪಗಳ ಶೋಭಾಯಾತ್ರೆ, ಮಂಟಪಗಳಲ್ಲಿ ಆಕರ್ಷಣೀಯ ಕಲಾಕೃತಿಗಳು, ದೈವಿಕ ಕಥಾ ಸಾರಾಂಶ ಒಳಗೊಂಡ ದೇವದಾನವರ ಕಾಳಗ, ಕಣ್ಕುಕ್ಕುವ ಬೆಳಕಿನ ಚಿತ್ತಾರ, ಅಬ್ಬರದ ಡಿಜೆ, ಸುರಾಸುರರ ಆರ್ಭಟದೊಂದಿಗೆ ದೇವಲೋಕವೇ ಸೃಷ್ಟಿಯಾದಂತಹ ಅನುಭವ...

ಆದರೆ, ಈ ಬಾರಿ ಇದ್ಯಾವುದು ಇರಲಿಲ್ಲ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ಸೀಮಿತಗೊಂಡ ಮಡಿಕೇರಿ ದಸರಾ ಉತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ಮಡಿಕೇರಿ ನಗರ ಪ್ರತಿ ಬಾರಿಯಂತೆ ಜನಜಂಗುಳಿ ಇಲ್ಲದೆ ಬೀಕೋ ಎನ್ನುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ದಸರಾ ಸರಳ ಆಚರಣೆ ಎಂದು ನಿಗದಿಯಾಗಿದ್ದ ಕಾರಣ ಜನಸಾಂದ್ರತೆ ವಿರಳವಾಗಿತ್ತು. ಹತ್ತು ಮಂಟಪ ಸಮಿತಿಗಳು ಪಿಕ್‍ಅಪ್ ವಾಹನದಲ್ಲಿ ಮಂಟಪ - ಸಣ್ಣ ಲೈಟಿಂಗ್ ಬೋರ್ಡ್ ಅಳವಡಿಸಿ ಕಲಶವಿಟ್ಟು ದೇವರ ಮೂರ್ತಿಗಳೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆ ನಡೆಸಿದವು.

ರಾತ್ರಿ 7.20 ಗಂಟೆ ಸುಮಾರಿಗೆ ದಶಮಂಟ ಪಗಳ ಸಾರಥಿ ಶ್ರೀ ಪೇಟೆ ರಾಮಮಂದಿರ ಮಂಟಪ ಹೊರಡುವದರೊಂದಿಗೆ ಕಲಶ ಮೆರವಣಿಗೆಗೆ ಚಾಲನೆ ದೊರೆಯಿತು.

(ಮೊದಲ ಪುಟದಿಂದ) ರಾಮಮಂದಿರ ಮಂಟಪದಲ್ಲಿ ರಾಮ, ಲಕ್ಷ್ಮಣ, ಸೀತೆ, ಆಂಜನೇಯ ಮೂರ್ತಿಗಳಿದ್ದವು. ಶಕ್ತಿ ದೇವತೆಗಳ ಹಿರಿಯಕ್ಕ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ಸಮಿತಿ ಲೈಟಿಂಗ್ ಬೋರ್ಡ್‍ನೊಂದಿಗೆ ದೇವಿ ಹಾಗೂ ವಿಷ್ಣುವಿನ ಮೂರ್ತಿಯನ್ನು ಅಳವಡಿಸಿತ್ತು. ದಂಡಿನ ಮಾರಿಯಮ್ಮ ಸಮಿತಿಯಿಂದ ದೇವಿ ಹಾಗೂ ಅಸುರ ಮೂರ್ತಿಯೊಂದಿಗೆ ಲೈಟಿಂಗ್ ಬೋರ್ಡ್ ಹಾಕಲಾಗಿತ್ತು. ಕೋಟೆ ಮಾರಿಯಮ್ಮ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕಂಚಿಕಾಮಾಕ್ಷಿ ಸಮಿತಿ ಲೈಟಿಂಗ್ ಬೋರ್ಡ್‍ನೊಂದಿಗೆ ವಿಷ್ಣು ಹಾಗೂ ದೇವಿಯ ಮೂರ್ತಿಗಳನ್ನು ಅಳವಡಿಸಿತ್ತು.

ಕೋಟೆ ಗಣಪತಿ ಸಮಿತಿಯು ವಿನಾಯಕ ಹಾಗೂ ರಕ್ಕಸನ ಮೂರ್ತಿಗಳನ್ನು ಲೈಟಿಂಗ್ ಬೋರ್ಡ್‍ನೊಂದಿಗೆ ಅಳವಡಿಸಿತ್ತು. ಕೋದಂಡ ರಾಮ ಸಮಿತಿಯ ಹಂಸ ರಥದಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ದೇಚೂರು ರಾಮಮಂದಿರದ ಕುದುರೆ ರಥದಲ್ಲಿ ದೇವಿ ಆಸೀನಳಾಗಿದ್ದಳು. ಚೌಡೇಶ್ವರಿ ಸಮಿತಿ ಲೈಟಿಂಗ್ ಬೋರ್ಡ್ ನೊಂದಿಗೆ ದೇವಿ ಹಾಗೂ ರಾಕ್ಷಸನ ಮೂರ್ತಿಯನ್ನು ಅಳವಡಿಸಿದ್ದರೆ, ಕರವಲೆ ಭಗವತಿ ಸಮಿತಿ ಲೈಟಿಂಗ್ ಬೋರ್ಡ್‍ನೊಂದಿಗೆ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿತ್ತು.

ಕೋದಂಡ ರಾಮ, ಚೌಡೇಶ್ವರಿ ಹಾಗೂ ಕರವಲೆ ಭಗವತಿ ಮಂಟಪಗಳು ಐಜಿ ವೃತ್ತದವರೆಗೆ ಬಂದು ಅಲ್ಲಿಂದ ಬನ್ನಿ ಮಂಟಪಕ್ಕೆ ತೆರಳಿದರೆ, ಉಳಿದ ಮಂಟಪಗಳು ತಮ್ಮ ತಮ್ಮ ದೇವಾಲಯದ ಬಳಿಯಿಂದ ನೇರವಾಗಿ ಬನ್ನಿ ಮಂಟಪಕ್ಕೆ ಸಾಗಿದವು. ದಶ ದೇವಾಲಯಗಳನ್ನು ಹೊರತುಪಡಿಸಿ ಪ್ರತಿ ಭಾರಿ ವಿಜಯದಶಮಿಯಂದು ವಿದ್ಯುತ್ ಅಲಂಕಾರದೊಂದಿಗೆ ಜಗಮಗಿಸುತ್ತಿದ್ದ ಬಹುತೇಕ ಕಟ್ಟಡಗಳಲ್ಲಿ ಈ ಬಾರಿ ಕತ್ತಲು ಆವರಿಸಿತ್ತು. ನಗರದ ರಸ್ತೆ ಬದಿಗಳಲ್ಲಿ ಬೀದಿ ದೀಪಗಳನ್ನು ಬಿಟ್ಟು ಬೇರಾವದೇ ವಿದ್ಯುತ್ ಅಲಂಕಾರಗಳಿರಲಿಲ್ಲ. ಸ್ಥಳೀಯರು ಹಾಗೂ ಒಂದಷ್ಟು ಪ್ರವಾಸಿಗರನ್ನು ಹೊರತು ಪಡಿಸಿ ಹೆಚ್ಚಿನ ಜನಸಾಂದ್ರತೆ ಎಲ್ಲೂ ಕಂಡು ಬರಲಿಲ್ಲ. ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಗಿಜಿಗುಡುತ್ತಿದ್ದ ಗಾಂಧಿ ಮೈದಾನದಲ್ಲಿ ಈ ಬಾರಿ ನೀರವ ಮೌನ ಆವರಿಸಿತ್ತು. ರಸ್ತೆಯುದ್ದಕ್ಕೂ ಕಂಡು ಬರುತ್ತಿದ್ದ ವ್ಯಾಪಾರ ವಹಿವಾಟು ಈ ಬಾರಿ ಇರಲಿಲ್ಲ. ನಾಲ್ಕು ಕರಗಗಳಿಗೆ ಪ್ರತ್ಯೇಕ ವಾದ್ಯಗೋಷ್ಠಿ ಇತ್ತು. ಮಂಟಪಗಳಲ್ಲಿ ಯಾವದೇ ವಾದ್ಯಗೋಷ್ಠಿ ಇರಲಿಲ್ಲ. ಈ ನಡುವೆ ಕೋಟೆ ಮಾರಿಯಮ್ಮ ಹಾಗೂ ಕಂಚಿಕಾಮಾಕ್ಷಿ ದೇವಾಲಯಗಳ ಬಳಿ ಕರಗದ ವಾದ್ಯಗೋಷ್ಠಿಗೆ ಹಲವಾರು ಮಂದಿ ನರ್ತಿಸುತ್ತಿದ್ದುದು ಕಂಡು ಬಂತು.

ಎಲ್ಲಾ ಮಂಟಪಗಳನ್ನು ವೀಕ್ಷಿಸಲು ವಿರಳ ಸಂಖ್ಯೆಯಲ್ಲಿ ಜನರು ಬರುತ್ತಿದ್ದದು ಕಂಡು ಬಂತು. ಕೋಟೆ ಗಣಪತಿ ದೇವಾಲಯದ ಒಳಕ್ಕೆ ತೆರಳಲು ಪೊಲೀಸ್ ಠಾಣೆ ಎದುರಿನ ಗೇಟ್ ಮೂಲಕ ಮಾತ್ರ ಅವಕಾಶ ನೀಡಲಾಗಿತ್ತು. ಪ್ರತಿಯೊಂದು ಮಂಟಪಗಳ ಬಳಿಯಲ್ಲೂ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಗರ ವ್ಯಾಪ್ತಿಯ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟು ಬಿಕೋ ಎನ್ನುತ್ತಿದ್ದವು. ಮಂಟಪಗಳು ಸಾಗುವ ವೇಳೆ ಮಂಟಪಗಳ ಬಳಿ ನಿರ್ದಿಷ್ಟ ಮಂದಿಗೆ ಮಾತ್ರ ಇರಲು ಅವಕಾಶ ನೀಡಲಾಗಿತ್ತು. ಉಳಿದಂತೆ ಸಾರ್ವಜನಿಕರು ದೂರದಿಂದಲೇ ಮಂಟಪವನ್ನು ವೀಕ್ಷಿಸಬೇಕಾಯಿತು. ಕಲಶವನ್ನು ಹೊತ್ತ ಮಂಟಪಗಳು ಹಾಗೂ ಶಕ್ತಿ ದೇವತೆಗಳ ಕರಗಗಳು ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಗಡಿಯಲ್ಲಿ ತಡೆ

ಮಡಿಕೇರಿ ದಸರಾ ವೀಕ್ಷಿಸಲು ಹೊರಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದ ವಾಹನಗಳಲ್ಲಿ ಆಗಮಿಸುತ್ತಿದ್ದ ಪ್ರವಾಸಿಗರನ್ನು ಕುಶಾಲನಗರ ಗಡಿಭಾಗದಲ್ಲಿ ತಡೆಯುವ ಕಾರ್ಯಾಚರಣೆ ನಡೆಯಿತು.

ಸಂಜೆಯಾಗುತ್ತಲೇ ಮೈಸೂರು ಕಡೆಯಿಂದ ನೂರಾರು ವಾಹನಗಳು ಕುಶಾಲನಗರ ಮೂಲಕ ಮಡಿಕೇರಿ ಕಡೆಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಶೈಲೇಂದ್ರ ಕುಮಾರ್, ಪೆÇಲೀಸ್ ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ಮತ್ತು ಗ್ರಾಮಾಂತರ ಪೆÇಲೀಸರು ಕೊಪ್ಪ ಕುಶಾಲನಗರ ಗಡಿಯಲ್ಲಿ ರಾತ್ರಿ ತನಕ ಪರಿಶೀಲಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯ ನಡೆಸಿದರು. ಪರಿಶೀಲನೆ ಸಂದರ್ಭದಲ್ಲಿ ಕೊಪ್ಪ-ಕುಶಾಲನಗರ ಗಡಿಭಾಗದಲ್ಲಿ ನೂರಾರು ವಾಹನಗಳ ಸಾಲು ಕಂಡು ಬಂತು. ಕೊರೊನಾ ಸೋಂಕು ತಡೆಯುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿವೈಎಸ್ಪಿ ಶೈಲೇಂದ್ರ ಕುಮಾರ್ ತಿಳಿಸಿದರು.