ಕಣಿವೆ, ಅ. 27: ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಕೂಡ ಆರ್ಥಿಕವಾಗಿ ಸದೃಢವಾಗಬೇಕೆಂದು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಕರೆ ನೀಡಿದರು. ಗುಡ್ಡೆಹೊಸೂರು ಹಾಲು ಉತ್ಪಾದಕರ ಸಂಘದ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗುಡ್ಡೆಹೊಸೂರು ಹಾಲು ಉತ್ಪಾದಕ ಸಂಘ ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಅತ್ಯಂತ ಮಾದರಿಯಾದ ಸಂಘವಾಗಿದೆ. ಹೈನುಗಾರಿಕೆ ಅವಲಂಬಿತ ಕುಟುಂಬಗಳು ಹಾಲು ನೀಡುವ ಹಸುಗಳಿಗೆ ಬೇಕಾದ ಪೌಷ್ಠಿಕ ಆಹಾರಗಳನ್ನು ಪೂರೈಸುವ ಮೂಲಕ ಉತ್ತಮವಾಗಿ ನಿರ್ವಹಿಸಬೇಕೆಂದು ಸಲಹೆಯಿತ್ತರು.
ಈ ಬಾರಿ ಕೊರೊನಾ ಕಾರಣದಿಂದ ಶಾಲೆಗಳು ತೆರೆಯದೆ, ಪ್ರವಾಸೋದ್ಯಮವೂ ಸ್ಥಗಿತಗೊಂಡ ಕಾರಣ, ಮದುವೆ ಮೊದಲಾದ ಶುಭ ಸಮಾರಂಭಗಳಿಗೂ ವಿಘ್ನ ಕಾಡಿರುವ ಹಿನ್ನೆಲೆ ಹಾಲು ಒಕ್ಕೂಟದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹಾಲು ಖರ್ಚಾಗದೆ ಒಕ್ಕೂಟ ಸಂಕಷ್ಟದಲ್ಲಿದೆ. ಆದರೂ ಕೂಡ ನಮ್ಮ ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಅವರು ಹೈನುಗಾರರಿಂದ ಹಾಲು ಖರೀದಿಸದೆ ಸ್ಥಗಿತ ಮಾಡಿದರೆ ಅವರಿಗೆ ಸಂಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಹಾಲನ್ನು ಖರೀದಿಸಿದ್ದೇವೆ. ಬಳಕೆಯಾಗದೇ ಉಳಿದಂತಹ ಹಾಲಿನಿಂದ 200 ಕೋಟಿ ಮೌಲ್ಯದ ಹಾಲು ಪೌಡರ್ ಸಂಗ್ರಹಿಸಿಟ್ಟಿದ್ದೇವೆ ಎಂದು ಹೇಮಂತ್ಕುಮಾರ್ ವಿವರಿಸಿದರು.
ಒಕ್ಕೂಟದ ವಿಸ್ತರಣಾಧಿಕಾರಿ ವೀಣಾ ಮಾತನಾಡಿ, ಹಸುಗಳ ದೇಹಗಳ ನಿರ್ವಹಣೆಗೆ ಖನಿಜ ಮಿಶ್ರಣಗಳನ್ನು ದಿನಂಪ್ರತಿ ಬೆಳಗ್ಗೆ ಸಂಜೆ ಕನಿಷ್ಟ ನೂರು ಗ್ರಾಂ ನಷ್ಟು ನೀಡುವ ಮೂಲಕ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ನಾವೆಲ್ಲರೂ ಕ್ಯಾಲ್ಸಿಯಂ ಕಾರಣಕ್ಕೆ ಹೆಚ್ಚಾಗಿ ಹಾಲು ಕುಡಿಯುತ್ತೇವೆ. ಆದ್ದರಿಂದ ಹೈನುಗಾರಿಕೆ ರೈತರು ಹಸುಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಪೂರೈಸಬೇಕೆಂದರು.
ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಬಿ.ಪಿ. ಗುರುಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗುಡ್ಡೆಹೊಸೂರು ಹಾಲು ಉತ್ಪಾದಕ ಸಹಕಾರ ಸಂಘ 38 ವರ್ಷಗಳನ್ನು ಪೂರೈಸಿದೆ. ಸಂಘದಲ್ಲಿ ಪ್ರಸ್ತುತ 467 ಸದಸ್ಯರಿದ್ದಾರೆ. ಈ ಪೈಕಿ ಶೇ. 80 ಮಂದಿ ಮಾತ್ರ ಸಕ್ರಿಯರಾಗಿ ಹಾಲು ಪೂರೈಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸಂಘದಲ್ಲಿ 4 ಲಕ್ಷದ 856 ಲೀಟರ್ ಹಾಲು ಸಂಗ್ರಹ ಮಾಡಿದ್ದೇವೆ. ಅಲ್ಲದೇ ಹಾಸನ ಹಾಲು ಒಕ್ಕೂಟ ನೀಡುವ ದರದ ಜೊತೆಗೆ ಸಂಘದ ವತಿಯಿಂದ ಹೆಚ್ಚುವರಿಯಾಗಿ 1 ರೂ.ಗಳನ್ನು ನೀಡುತ್ತಿದ್ದು ಇದರಿಂದಾಗಿ ಈ ಬಾರಿ 5.44 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದರು. ಸಂಘದ ಅಧ್ಯಕ್ಷ ಕಿರಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರುಗಳಾದ ಬಿ.ವಿ. ಮೋಹನಕುಮಾರ್, ಬಿ.ಟಿ. ಕಾವೇರಪ್ಪ, ಬಿ.ಎಸ್. ಧನಪಾಲ್, ಪಿ.ಬಿ. ಯತೀಶ್, ಬಿ.ಡಿ. ವೀರೇಂದ್ರ, ಬಿ.ಸಿ. ಸತೀಶ್, ಬಿ.ಎಂ. ಸಾಗರ್, ಸಿ.ಬಿ. ಪಳಂಗಪ್ಪ, ಭಾರತಿ ಸುರೇಂದ್ರ, ಎನ್.ಪಿ. ಸುಲೋಚನ, ಎಸ್.ಆರ್. ಕಮಲ ಇದ್ದರು.
ವಿಸ್ತರಣಾಧಿಕಾರಿಗೆ ತರಾಟೆ: ಹಾಲು ಉತ್ಪಾದಕ ಸಂಘಕ್ಕೆ ರೈತರು ಪೂರೈಸುತ್ತಿರುವ ಹಾಲಿನ ಗುಣಮಟ್ಟ ಪರೀಕ್ಷಿಸಲು ಮತ್ತು ಸೂಕ್ತ ಮಾರ್ಗದರ್ಶನ ನೀಡಲು ಕೂಡಿಗೆ ಡೈರಿಯ ವಿಸ್ತರಣಾಧಿಕಾರಿ ಕಡ್ಡಾಯವಾಗಿ ಭೇಟಿ ನೀಡಬೇಕೆಂಬ ನಿಯಮವಿದ್ದರೂ ಕೂಡ ಏಕೆ ಭೇಟಿ ನೀಡುತ್ತಿಲ್ಲ. ನೀವು ವರ್ಷದಲ್ಲಿ ಎಷ್ಟು ಬಾರಿ ಭೇಟಿ ನೀಡಿದ್ದೀರಾ? ಎಂದು ಮಹಾಸಭೆಯಲ್ಲಿ ರೈತರು ವಿಸ್ತರಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ವಿಸ್ತರಣಾಧಿ ಕಾರಿ ವೀಣಾ, ಸಂಘದಲ್ಲಿ ಹಾಲಿನ ಗುಣಮಟ್ಟದ ಸಮಸ್ಯೆ ಉದ್ಭವಿಸಿದಾಗ ಬಂದು ಹಾಲು ಶೇಖರಣೆ ಕಾರ್ಯ ಮುಗಿಯುವವರೆಗೂ ಇದ್ದು ಹೋಗಿದ್ದೇನೆ. ನೀವು ಹೇಳುವ ಹಾಗೆ ಪ್ರತೀ ತಿಂಗಳು ಬಂದಿಲ್ಲ ಎಂದರು.
ಹಾಲು ಉತ್ಪಾದಕರ ಸಂಘಕ್ಕೆ ವರ್ಷವಿಡೀ ಅತ್ಯಂತ ಹೆಚ್ಚು ಹಾಲು ಪೂರೈಸಿದ ರೈತರಿಗೆ ಹಾಗೂ ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸ ಲಾಯಿತು.