ಮಡಿಕೇರಿ, ಅ. 27 : ಕೊಡಗಿನಲ್ಲಿ ಹಿರಿಯರು ಕಾಪಾಡಿಕೊಂಡು ಬಂದಿರುವ ಭೂ ಒಡೆತನದ ಹಕ್ಕಿಗಾಗಿ, ಗ್ರಾಮ ಲೆಕ್ಕಿಗರಿಂದ ಜಿಲ್ಲಾಧಿಕಾರಿ ಕಚೇರಿಯ ತನಕ, ತಾವೇ ಸಲ್ಲಿಸಿರುವ ಅರ್ಜಿಗಳ ಸಂಬಂಧ ನಿರಂತರ ಅಲೆಯುತ್ತಿರುವ ಸಾರ್ವಜನಿಕರ ವ್ಯಥೆಯ ಕತೆ ಇದು. ಕಂದಾಯ ಹಾಗೂ ಭೂಮಾಪನ ಕಚೇರಿ ಮಂದಿಯ ಕರ್ತವ್ಯ ಲೋಪದಿಂದ ಎದುರಾಗಿರುವ ಸಮಸ್ಯೆಗಳನ್ನು ನೊಂದವರು ಕೊಡಗು ಸೇವಾ ಕೇಂದ್ರಕ್ಕೆ ಬಂದು ಬಿಚ್ಚಿಡತೊಡಗಿದ್ದಾರೆ. ಈ ಸೂಕ್ಷ್ಮ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳು ಸಾಧ್ಯವಿರುವ ಮಟ್ಟಿಗೆ ಸಮಸ್ಯೆ ಇತ್ಯರ್ಥಗೊಳಿಸಲು ಮುಂದಾಗಿದ್ದಾರೆ.‘ಶಕ್ತಿ’ಗೆ ಲಭಿಸಿರುವ ಖಚಿತ ಮಾಹಿತಿ ಪ್ರಕಾರ, ಅನೇಕ ಹಿರಿಯ ನಾಗರಿಕರು ಸೇರಿದಂತೆ ಸಾಕಷ್ಟು ಸಾರ್ವಜನಿಕರು ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಇಲ್ಲಿನ ಕೊಡವ ಸಮಾಜ ಕಟ್ಟಡದಲ್ಲಿರುವ ಕೊಡಗು ಸೇವಾ ಕೇಂದ್ರಕ್ಕೆ ಬರತೊಡಗಿದ್ದಾರೆ. 70ಕ್ಕೂ ಅಧಿಕ ಅರ್ಜಿ : ಈ ಕೇಂದ್ರಕ್ಕೆ ಕುಟ್ಟದಿಂದ ಕೊಡ್ಲಿಪೇಟೆವರೆಗಿನ ಸಾರ್ವಜನಿಕರು ಕಂದಾಯ ಹಾಗೂ ಭೂಮಾಪನ ಇಲಾಖೆ ಮಂದಿಯ ಕರ್ತವ್ಯ ಲೋಪದ ಬಗ್ಗೆ ಸಾಕಷ್ಟು ದೂರು ತಂದಿದ್ದಾರೆ. ಇದುವರೆಗೆ ಸೇವಾ ಕೇಂದ್ರಕ್ಕೆ ಲಭಿಸಿರುವ 74 ಅರ್ಜಿಗಳಲ್ಲಿ ಬಹುತೇಕ ಮೇಲಿನ ಎರಡು ಇಲಾಖಾ ಮಂದಿ ಎಸಗುತ್ತಿರುವ ಪ್ರಮಾದಗಳಿಗೆ ಸಂಬಂಧಿಸಿದ್ದಾಗಿವೆ.
ಉದಾಹರಣೆ ಕೊಡ್ಲಿಪೇಟೆ ಹೋಬಳಿ ಹೊಸಳ್ಳಿ ಗ್ರಾಮದ ಮಾದ್ರೆ ಎಂಬಲ್ಲಿನ ರೈತರೊಬ್ಬರು ಸಣ್ಣ ಭೂಹಿಡುವಳಿದಾರರಾಗಿದ್ದಾರೆ. ಸರ್ವೆ ನಂಬರ್ 59ರಲ್ಲಿ 1.80 ಎಕರೆ ಭೂಮಿಯನ್ನು ಹೊಂದಿದ್ದಾರೆ. ಅಲ್ಲಿನ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗರ ಕೈಚಳಕದಿಂದ ಈ ಜಮೀನು ಕಾವೇರಿ ನೀರಾವರಿ ನಿಗಮದ ಒಡೆತನಕ್ಕೆ ವರ್ಗಾಯಿಸಲ್ಪಟ್ಟಿದೆ! ತಮ್ಮ ಆಸ್ತಿ ಅನ್ಯರ ಪಾಲಾಗಿರುವ ಸತ್ಯಾಂಶ ತಿಳಿಯಲು ಭೂಮಾಲೀಕ ಅರ್ಜಿ ಸಲ್ಲಿಸಿ, ಲೋಪ ಸರಿಪಡಿಸುವಂತೆ ಮೇಲ್ಮನವಿಯೊಂದಿಗೆ ಕೋರಿಕೆ ಇರಿಸಿದ್ದಾರೆ.
ಆದರೆ ಕಳೆದ ಮೂರು ವರ್ಷಗಳಿಂದ ಯಾರೋ ಮಾಡಿದ ತಪ್ಪಿಗಾಗಿ 130 ಕಿ.ಮೀ. ದೂರದ ಜಿಲ್ಲಾ ಕೇಂದ್ರ ತನಕ ವಿವಿಧ ಕಚೇರಿಗಳಿಗೆ ಅಲೆದು ಸುಸ್ತು ಹೊಡೆದಿದ್ದಾರೆ. ಒಂದಿಷ್ಟು ಪ್ರಾಮಾಣಿಕರ ನಡುವೆ ಭ್ರಷ್ಟ ವ್ಯವಸ್ಥೆಯ ಮಂದಿ ಯಾವದೇ ತಪ್ಪು ಮಾಡದ ರೈತನನ್ನು ಪೀಡಿಸಿರುವರೇ ಹೊರತು ನ್ಯಾಯ ಕಲ್ಪಿಸಿಲ್ಲ. ಪರಿಣಾಮ ಈಗ ಕೊಡಗು ಸೇವಾ ಕೇಂದ್ರದ ಬಾಗಿಲಲ್ಲಿ ಈ ರೈತ ನಿಲ್ಲುವಂತಾಗಿದೆ.
ಮಾಜಿ ಯೋಧನ ಪಾಡು : ದಶಕಗಳ ಕಾಳ ವಾಯುಸೇನೆಯಲ್ಲಿ ಸೇವೆಗಾಗಿ 4 ಎಕರೆ ಜಾಗ ಮಂಜೂರಾಗಿರುವ ಮಾಜಿ ಯೋಧರೊಬ್ಬರಿಗೆ, ಇದುವರೆಗೆ ಗೇಣಿಪತ್ರ ಪಡೆಯಲು ಸಾಧ್ಯವಾಗಿಲ್ಲ. ಬೆಟ್ಟಗೇರಿ ಗ್ರಾ.ಪಂ. ವ್ಯಾಪ್ತಿಯ ಈ ಯೋಧ ಕಂದಾಯ ಕಚೇರಿ ಸಿಬ್ಬಂದಿಯಿಂದ ತಹಶೀಲ್ದಾರ್ ತನಕ ಸುತ್ತಾಡಿ ಕೈ ಬಿಸಿ ಮಾಡಿದ್ದರೂ ಅಲೆಯುವದು ತಪ್ಪಿಲ್ಲ. ತಮ್ಮ ತಂದೆ ಹೆಸರಿನ ಪಿತ್ರಾರ್ಜಿತ ಆಸ್ತಿ ಹಕ್ಕು ಪತ್ರ ವರ್ಗಾವಣೆಗೂ ಸಂಬಂಧಿಸಿದವರು ಸ್ಪಂದಿಸಿಲ್ಲ; ಹೀಗಾಗಿ ಕೊಡಗು ಸೇವಾ ಕೇಂದ್ರದತ್ತ ಮುಖ ಮಾಡಿದ್ದಾರೆ.
ನೊಂದ ನಾಗರಿಕರ ಅನಿಸಿಕೆ ಪ್ರಕಾರ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ತಾಲೂಕು ಕಚೇರಿಗಳು ಹಾಗೂ ಭೂಮಾಪನ ಕೇಂದ್ರಗಳಲ್ಲಿನ ಸಾಕಷ್ಟು ಸಿಬ್ಬಂದಿಯನ್ನು ವರ್ಷಗಳು ಉರುಳಿದಂತೆ ಬೇರೆ ಬೇರೆ ಕೆಲಸಗಳಿಗೆ ನಿಯೋಜಿಸಲಾಗುತ್ತಿದೆ. ಈ ರೀತಿ ನಿಯೋಜನೆ ಹೊಂದಿದವರು, ತಮಗೆ ಸಂಬಂಧ ಪಡದ ಕಡತಗಳನ್ನು ಬದಲಿ ನಿಯೋಜಕರಿಗೆ ವರ್ಗಾಯಿಸದೆ ಆಮಿಷಕ್ಕೆ ಒಳಗಾಗಿ ತಮ್ಮಲ್ಲೇ ಇರಿಸಿಕೊಳ್ಳುತ್ತಿರುವದು ಬೆಳಕಿಗೆ ಬಂದಿದೆ.
‘ಸಕಾಲ’ದಲ್ಲಿ ಕೈ ಚಳಕ : ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾರ್ವಜನಿಕ ಕೆಲಸಗಳು ಸುಲಲಿತವಾಗಿ ನಡೆಯುವ ಆಶಯದಿಂದ ‘ಸಕಾಲ’ ಕೇಂದ್ರ ಸ್ಥಾಪಿಸಿದೆ. ಆದರೆ ಇಲ್ಲಿನ ಕೆಲವು ಸಿಬ್ಬಂದಿ ಸಾರ್ವಜನಿಕ ದೂರುಗಳನ್ನು ಅಥವಾ ಅರ್ಜಿಗಳನ್ನು ಗಣಕಯಂತ್ರದಲ್ಲಿ ನಮೂದಿಸುವದೇ ಇಲ್ಲ ಎಂಬ ಆರೋಪವಿದೆ. ಬದಲಾಗಿ ಕಡತ ಸಂಗ್ರಹ ಕಚೇರಿಯ ವಿಷಯ ನಿರ್ವಾಹಕರೊಬ್ಬರ ಬಳಿ ಕಳುಹಿಸಿಕೊಡುತ್ತಾರಂತೆ.
(ಮೊದಲ ಪುಟದಿಂದ) ಆ ವ್ಯಕ್ತಿ ತನಗೆ ಕೈಬಿಸಿ ಮಾಡಿದವರಿಗೆ ಮಾತ್ರ ಗಣಕಯಂತ್ರದಲ್ಲಿ ದೂರು ನಮೂದಿಸಲು ಮುಂದಾಗಿ, ಹಿರಿತನದ ಆಧಾರದಲ್ಲಿ ಅರ್ಜಿ ಸಲ್ಲಿಸಿದವರನ್ನು ನಿರಂತರ ಅಲೆಯುವಂತೆ ಅಸಡ್ಡೆ ತೋರುತ್ತಿದ್ದಾರೆ ಎಂದು ಅನೇಕರು ನೋವಿನೊಂದಿಗೆ ಸೇವಾಕೇಂದ್ರದಲ್ಲಿ ದೂರಿಕೊಂಡಿದ್ದಾರೆ.
ಸೇವಾ ಕೇಂದ್ರ ಇತ್ಯರ್ಥ: ಈ ರೀತಿ ಸರದಿಯಲ್ಲಿ ಬರುತ್ತಿರುವ ದೂರುಗಳಿಗೆ ಸ್ಪಂದಿಸುತ್ತಿರುವ ಸೇವಾ ಕೇಂದ್ರ ಪ್ರಮುಖರು, ನೊಂದವರ ಅಹವಾಲು ಆಲಿಸುತ್ತಾ, ಯಾವ ಹಂತದಲ್ಲಿ ಕಡತಗಳನ್ನು ಹಿಡಿದಿಟ್ಟುಕೊಳ್ಳಲಾಗಿದೆ ಎಂದು ನೇರವಾಗಿ ವಿವಿಧ ಕಚೇರಿಗಳಲ್ಲಿ ಪರಿಶೀಲಿಸಿ, ಭ್ರಷ್ಟರಿಗೆ ಬಿಸಿ ಮುಟ್ಟಿಸುವದರೊಂದಿಗೆ ಸಾರ್ವಜನಿಕರಿಗೆ ನ್ಯಾಯ ಕೊಡಿಸಲು ಕಾರ್ಯೋನ್ಮುಖರಾಗಿದ್ದಾರೆ.
ಈ ರೀತಿಯಾಗಿ ಪ್ರಸಕ್ತ 12 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸಾಧ್ಯವಿರುವ ಮಟ್ಟಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂದೂ ಅವರುಗಳ ಗಮನ ಸೆಳೆದು ನೊಂದವರ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದು ‘ಶಕ್ತಿ’ಗೆ ಕೊಡಗು ಸೇವಾ ಕೇಂದ್ರದ ಪ್ರಮುಖರು ಮಾಹಿತಿ ನೀಡಿದ್ದಾರೆ.