ಮಡಿಕೇರಿ, ಅ. 24: ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾದ ಪ್ರಮುಖ ಆಚರಣೆ ಕರಗ ಉತ್ಸವ ಹಲವಾರು ನಿರ್ಬಂಧಗಳಿಗೊಳಪಟ್ಟು ನಡೆಯುತ್ತಿದೆ.
ಇಂತಹದ್ದೇ ಸಂದಿಗ್ಧ ಪರಿಸ್ಥಿತಿ ಸುಮಾರು 57 ವರ್ಷಗಳ ಹಿಂದೆಯೂ ಎದುರಾಗಿತ್ತು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಕರಗ ಸಮಿತಿ ಪ್ರಮುಖ ಮಧುರಯ್ಯ ಅವರು ಅನುಭವ ಹಂಚಿಕೊಂಡಿದ್ದಾರೆ. ಭಾರತ-ಚೀನಾ ಯುದ್ಧದ ಸಂದರ್ಭ 1963ರಲ್ಲಿ ವಿಜಯ ದಶಮಿಯಂದು ರಾತ್ರಿ ಶಕ್ತಿ ದೇವತೆಗಳ ಕರಗಗಳು ಗ್ಯಾಸ್ ಲೈಟ್ ಬೆಳಕಿನಲ್ಲಿ ಸಾಗಬೇಕಾದ ಪ್ರಸಂಗ ಎದುರಾಗಿತ್ತು. ಭಾರತ-ಚೀನಾ ಯುದ್ಧದ ಹಿನ್ನೆಲೆಯಲ್ಲಿ ವಿದ್ಯುತ್ ಬೆಳಕಿನಲ್ಲಿ ಕರಗ ಪ್ರದಕ್ಷಿಣೆಗೆ ಅವಕಾಶ ನೀಡಿದರೆ ಯುದ್ಧದ ಹೆಸರಿನಲ್ಲಿ ಅನಾಹುತಗಳು ಸಂಭವಿಸಬಹುದು ಎಂಬ ಕಾರಣಕ್ಕಾಗಿ ಬೀದಿ ದೀಪಗಳನ್ನು ಸೇರಿದಂತೆ ಎಲ್ಲ ಬೆಳಕಿನ ವ್ಯವಸ್ಥೆಗಳನ್ನು ರದ್ದುಗೊಳಿಸಿದ್ದ ಅಂದಿನ ಆಡಳಿತ ಕೇವಲ ಗ್ಯಾಸ್ ಲೈಟ್‍ವೊಂದನ್ನು ಮಾತ್ರ ಬಳಸಲು ಅನುಮತಿ ನೀಡಿತ್ತು. ಅಂತಹ ಸಂದರ್ಭದಲ್ಲೂ ಕೂಡ ಕರಗ ಪ್ರದಕ್ಷಿಣೆ ಸಂಪ್ರದಾಯದಂತೆ ನೆರವೇರಿತ್ತು.
ಪ್ರಸಕ್ತ ವರ್ಷ ಕೊರೊನಾ ಹಿನ್ನೆಲೆಯಲ್ಲಿ ವಿಜಯದಶಮಿ ಆಚರಣೆಯನ್ನು ಬೇಗ ಮುಗಿಸಬೇಕೆಂದು ಸರಕಾರ ಷರತ್ತು ವಿಧಿಸಿದೆ. ಅದರಂತೆ ನಾವು ಕೂಡ ಅದನ್ನು ಪಾಲಿಸಲು ತೀರ್ಮಾನಿಸಿದ್ದೇವೆ. ಆದರೆ ಕರಗಗಳ ಪ್ರದಕ್ಷಿಣೆಯನ್ನು ನಿಗದಿತ ಸಮಯದೊಳಗೆ ಮುಗಿಸುವಲ್ಲಿ ನಾವೆಷ್ಟೇ ಪ್ರಯತ್ನಿಸಿದರೂ ದೈವ ಇಚ್ಚೆ ಏನಿದೆಯೋ ಅದರಂತೆ ಎಲ್ಲವೂ ನಡೆಯಲಿದೆ ಎಂದು ಮಧುರಯ್ಯ ಅಭಿಪ್ರಾಯಿಸಿದ್ದಾರೆ.