ಶನಿವಾರಸಂತೆ, ಅ. 23: ಶನಿವಾರಸಂತೆಯ ನಾಡಕಚೇರಿಯಲ್ಲಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಮಾಜಿ ಸೈನಿಕರ ಜಾಗ ಮಂಜೂರಾತಿ ಮಾಡಿಕೊಡುವ ಬಗ್ಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕಿ ಗೀತಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈಗಾಗಲೇ ಮಾಜಿ ಸೈನಿಕರು ಜಾಗ ಮಂಜೂರಾತಿಗಾಗಿ ಅರ್ಜಿ ನೀಡಿರುವ ಬಗ್ಗೆ ಕಂದಾಯ ಇಲಾಖೆಯಲ್ಲಿ ಯಾವ ಹಂತದಲ್ಲಿ ಇರುತ್ತದೆ ಎಂದು ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡುವಂತೆ ಸೂಚಿಸಿದರು. ಭೂ ಲಭ್ಯತಾ ಪಟ್ಟಿಯಲ್ಲಿ ಖಾಲಿ ಇರುವ ಜಾಗಕ್ಕೆ ಮಂಜೂರಾತಿ ಅರ್ಜಿ ನೀಡಿ, ಮಂಜೂರಾತಿ ಮಾಡುವುದಾಗಿ ಸೂಚಿಸಿದರು. ಮಾಜಿ ಸೈನಿಕರು ಈಗಾಗಲೇ ಒತ್ತುವರಿ ಮಾಡಿ ಕೃಷಿ ಮಾಡಿದ್ದಲ್ಲಿ ನಮೂನೆ 57ರಲ್ಲಿ ಅರ್ಜಿ ನೀಡಿ ಅಕ್ರಮ - ಸಕ್ರಮದಡಿಯಲ್ಲಿ ಮಂಜೂರಾತಿ ಮಾಡಲು ವರದಿ ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಮಾಜಿ ಸೈನಿಕರಾದ ಕೆ.ಟಿ. ಹರೀಶ್, ಸುಚೀಂದ್ರ, ಗಂಗಾಧರ, ಕಂದಾಯ ಪರಿವೀಕ್ಷಕ ಬಿ.ಆರ್. ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿಗಳಾದ ಜಟ್ಟಪ್ಪ, ಸಂತೋಷ್, ಗ್ರಾಮ ಸಹಾಯಕ ರುದ್ರಯ್ಯ ಇತರರು ಉಪಸ್ಥಿತರಿದ್ದರು.