ತಮ್ಮು ಪೂವಯ್ಯ ಅಭಿಪ್ರಾಯ
ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿನ ಚಿಕಿತ್ಸೆಯ ಬಗ್ಗೆ ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಗುಣಮುಖರಾದ ಕೊಡಗು ಸೇವಾ ಕೇಂದ್ರದ ತಮ್ಮು ಪೂವಯ್ಯ ಅವರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳಷ್ಟೆ ಕೋವಿಡ್ ಪಾಸಿಟಿವ್ ಆಗಿ ಇದೀಗ ಸೋಂಕಿನಿಂದ ಗುಣಮುಖರಾದ ತಮ್ಮು ಅವರು ಆಸ್ಪತ್ರೆಯ ಚಿಕಿತ್ಸೆ ಹಾಗೂ ಆತಿಥ್ಯವನ್ನು ‘5 ಸ್ಟಾರ್’ ಎಂದು ಕರೆದಿದ್ದಾರೆ. 7 ದಿನಗಳ ಕಾಲ ಇಲ್ಲಿ ದಾಖಲಾಗಿದ್ದು ಯಾವುದೇ ತೊಂದರೆಯಿಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುದ್ದಾಗಿ ಅವರು ತಿಳಿಸಿದ್ದಾರೆ.
“ಶುಶ್ರೂಷಕಿಯರು, ವೈದ್ಯರು ಮತ್ತು ಇತರ ಸಿಬ್ಬಂದಿಗಳ ಸಹಕಾರಕ್ಕೆ ಸಾಟಿಯಿಲ್ಲ, ಅವರು ಬೆಳಿಗ್ಗೆ 5.30 ಕ್ಕೆ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ, ಎಲ್ಲಾ ರೋಗಿಗಳ ಆರೈಕೆ ಮಾಡಿ ಔಷಧಿಗಳನ್ನು ನೀಡುತ್ತಾರೆ. ಬೆಳಿಗ್ಗೆ 11:30 ರವರೆಗೂ ಇದೇ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅವರೆಲ್ಲರೂ ನಮ್ಮನ್ನು ನಿಸ್ವಾರ್ಥವಾಗಿ ಉಪಚರಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಆಹಾರ ಮತ್ತು ಕಾಫಿ-ಟೀ ಇತ್ಯಾದಿಯನ್ನು ದಿನಕ್ಕೆ 5 ಬಾರಿ ನಮಗೆ ನೀಡಲಾಗುತ್ತದೆ. ಆಹಾರ ಬಿಸಿಯಾಗಿ ಮತ್ತು ಅತ್ಯಂತ ಶುಚಿತ್ವದಿಂದ ಕೂಡಿರುತ್ತದೆ. 24 ಗಂಟೆಗಳ ಕಾಲ ಬಿಸಿನೀರು ಲಭ್ಯವಿದೆ. ಒಟ್ಟಾಗಿ ಆಸ್ಪತ್ರೆಯು ಸಂಪೂರ್ಣ ಶುಚಿತ್ವದಿಂದ ಕೂಡಿದೆ” ಎಂಬುದು ತಮ್ಮು ಅವರ ಸ್ವಂತ ಅನುಭವವಾಗಿದೆ.