ಕೋವಿಡ್ ಅಟ್ಟಹಾಸ ಕೊಂಚ ಕಡಿಮೆ
ಬೆಂಗಳೂರು, ಅ. 23: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಕೊಂಚ ಕಡಿಮೆಯಾಗುತ್ತಿದ್ದು ಶುಕ್ರವಾರ 5,356 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,93,907ಕ್ಕೆ ಏರಿಕೆಯಾಗಿದೆ. ಕೊರೊನಾ ವೈರಸ್‍ನಿಂದಾಗಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 51 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10,821ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2,688 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 3,21,054ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು 21 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇಂದು 8,749 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 6,93,584ಕ್ಕೆ ಏರಿಕೆಯಾಗಿದೆ. 89,483 ಮಂದಿ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 936 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸಂತ್ರಸ್ತರಿಗೆ ರೂ. 10,000 ಕೋಟಿ ನೆರವು
ಮುಂಬೈ, ಅ. 23: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರೈತರು ಸೇರಿದಂತೆ ರಾಜ್ಯದ ಪ್ರವಾಹ ಪೀಡಿತ ಜನರಿಗೆ ರೂ. 10,000 ಕೋಟಿ ನೆರವು ಘೋಷಿಸಿದ್ದಾರೆ. ಈ ಸಂಬಂಧ ಮಹಾ ವಿಕಾಸ್ ಅಘಾಡಿ(ಎಂವಿಎ)ಯ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, ದೀಪಾವಳಿಯಿಂದ ಈ ನೆರವು ನೀಡಲಾಗುವುದು ಎಂದು ಹೇಳಿದರು. ಮಹಾರಾಷ್ಟ್ರ ಸರ್ಕಾರವು ಇನ್ನೂ 38,000 ಕೋಟಿ ರೂಪಾಯಿಯನ್ನು ಕೇಂದ್ರದಿಂದ ಪಡೆಯಬೇಕಾಗಿದೆ ಎಂದು ಠಾಕ್ರೆ ಹೇಳಿದ್ದಾರೆ. ನಾನು ಈ ಹಣಕಾಸಿನ ನೆರವಿಗೆ ಪ್ಯಾಕೇಜ್ ಎಂಬ ಪದ ಬಳಸಲು ಇಷ್ಟಪಡುವುದಿಲ್ಲ, ಆದರೆ ನಾವು 10,000 ಕೋಟಿ ರೂಪಾಯಿಗಳ ಸಹಾಯವನ್ನು ನೀಡುತ್ತೇವೆ. ಇದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ" ಎಂದು ಮಹಾ ಸಿಎಂ ತಿಳಿಸಿದರು.
ಕಪಿಲ್ ದೇವ್‍ಗೆ ಹೃದಯಾಘಾತ
ನವದೆಹಲಿ, ಅ. 23: ಪ್ರಸಿದ್ಧ ಕ್ರಿಕೆಟಿಗ, ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್‍ಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರತಕ್ಕೆ ಮೊಟ್ಟ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ದೇವ್ ನವದೆಹಲಿಯ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರಲ್ಲಿ ಕಪಿಲ್ ದೇವ್ ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಮೂಲಕ ಸಾಕಷ್ಟು ಸಕ್ರಿಯರಾಗಿದ್ದರು. ಭಾರತದ ಮಾಜಿ ನಾಯಕ ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳಿವೆ. ಲಾಡ್ರ್ಸ್‍ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಶ್ರೇಷ್ಠ ಆಲ್‍ರೌಂಡರ್‍ಗಳಲ್ಲಿ ಒಬ್ಬರಾದ ಕಪಿಲ್ ದೇವ್ 1983 ರಲ್ಲಿ ಭಾರತ ಮರೆಯಲಾಗದ ವಿಶ್ವಕಪ್ ಗೆಲ್ಲುವುದಕ್ಕೆ ಕಾರಣವಾದವರು. ಕಪಿಲ್ ದೇವ್ ಅವರು ಕೆಲವು ತಿಂಗಳ ಹಿಂದೆ ಲಾಕ್‍ಡೌನ್ ಸಮಯದಲ್ಲಿ ಹೊಸ ಲುಕ್ ಹಂಚಿಕೊಂಡಾಗ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟ್ರೆಂಡ್ ಆಗಿ ಹೊರಹೊಮ್ಮಿದ್ದರು.
“ಕಾಶ್ಮೀರ್ ಟೈಮ್ಸ್” ಕಚೇರಿಗಳಿಗೆ ಬೀಗ
ನವದೆಹಲಿ, ಅ. 23: “ಕಾಶ್ಮೀರ್ ಟೈಮ್ಸ್” ಕಚೇರಿಗಳಿಗೆ ಜಮ್ಮು-ಕಾಶ್ಮೀರ ಆಡಳಿತ ಬೀಗಮುದ್ರೆ ಹಾಕಿರುವ ಕೇಂದ್ರ ಸರ್ಕಾರದ ನಿಲುವನ್ನು ಭಾರತೀಯ ಸಂಪಾದಕರ ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ತೀವ್ರವಾಗಿ ಖಂಡಿಸಿದೆ. ಶ್ರೀನಗರದಲ್ಲಿ 'ಕಾಶ್ಮೀರ್ ಟೈಮ್ಸ್' ಕಚೇರಿಗಳಿಗೆ ಜಮ್ಮು-ಕಾಶ್ಮೀರ ಆಡಳಿತ ಬೀಗಮುದ್ರೆ ಹಾಕಿರುವುದನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಸಂಪಾದಕರ ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ), ಈ ಕ್ರಮದಿಂದ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್‍ನ ಮಾಧ್ಯಮದ ಮೇಲೆ ಗೊಂದಲ ಪರಿಣಾಮ ಬೀರಿದೆ ಎಂದು ಹೇಳಿದೆ.
ಚೀನಾ ಸೈನಿಕನ ಬಳಿ ಸ್ಲೀಪಿಂಗ್ ಬ್ಯಾಗ್
ನವದೆಹಲಿ, ಅ. 23: ಡೆಮ್‍ಚೋಕ್ ಪ್ರದೇಶದ ಬಳಿ ಭಾರತೀಯ ಸೈನ್ಯದಿಂದ ಬಂಧಿಸಲ್ಪಟ್ಟ ಚೀನಾದ ಸೈನಿಕನು ಸ್ಲೀಪಿಂಗ್ ಬ್ಯಾಗ್, ಸ್ಟೋರೇಜ್ ಡಿವೈಸ್ ಮತ್ತು ಮೊಬೈಲ್ ಫೋನ್ ಅನ್ನು ಹೊಂದಿರುವುದು ಕಂಡು ಬಂದಿದೆ. ಕಾರ್ಪೋರಲ್ ವಾಂಗ್ ಯಾ ಲಾಂಗ್ ಎಂಬ ಸೈನಿಕನು ಪೂರ್ವ ಲಡಾಖ್‍ನ ಡೆಮ್‍ಚೋಕ್ ಪ್ರದೇಶದಲ್ಲಿನ ಭಾರತೀಯ ಭೂಪ್ರದೇಶಕ್ಕೆ ನೈಜ ನಿಯಂತ್ರಣ ರೇಖೆಯನ್ನು ದಾಟಿ ಬಂದು ಸೋಮವಾರ ಸೇನೆಯಿಂದ ಬಂಧಿಸಲ್ಪಟ್ಟಿದ್ದ. ಚೀನಾದ ಸೈನಿಕನು ನಮ್ಮ ಭದ್ರತಾ ಪಡೆಗಳಿಂದ ಬಂಧಿಸಲ್ಪಟ್ಟಾಗ ಅವನು ಸ್ಲೀಪಿಂಗ್ ಬ್ಯಾಗ್, ಖಾಲಿ ಡೇಟಾ ಸ್ಟೋರೇಜ್ ಡಿವೈಸ್, ಮೊಬೈಲ್ ಫೋನ್ ಜೊತೆಗೆ ತನ್ನ ಮಿಲಿಟರಿ ಗುರುತಿನ ಚೀಟಿಯನ್ನು ಹೊಂದಿದ್ದ, ಎಂದು ಸರ್ಕಾರಿ ಮೂಲಗಳು ಎಎನ್‍ಐಗೆ ತಿಳಿಸಿವೆ. ಚುಶುಲ್ ಮೀಟಿಂಗ್ ಹಟ್‍ನಲ್ಲಿ ನಡೆದ ಸುದೀರ್ಘ ಗಡಿ ಸಿಬ್ಬಂದಿ ಸಭೆಯಲ್ಲಿ ಸೈನಿಕನನ್ನು ಚೀನಾ ಸೇನೆಗೆ ಹಸ್ತಾಂತರಿಸುವ ಮೊದಲು ಸ್ಥಾಪಿತ ನಿಯಮಾವಳಿಗಳ ಪ್ರಕಾರ ಸಂಬಂಧಪಟ್ಟ ಮಿಲಿಟರಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದರು ಮತ್ತು ಪ್ರಶ್ನಿಸಿದರು ಎಂದು ಅವರು ಹೇಳಿದರು. ಈ ಘಟನೆಯ ಬಗ್ಗೆ ಹೇಳಿಕೆಯಲ್ಲಿ, ಸೇನೆಯ ಸೈನಿಕನಿಗೆ ಅತ್ಯಂತ ಎತ್ತರದ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಅವನನ್ನು ರಕ್ಷಿಸಲು ಆಮ್ಲಜನಕ, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳು ಸೇರಿದಂತೆ ವೈದ್ಯಕೀಯ ನೆರವು ನೀಡಲಾಗಿದೆ ಎಂದಿದೆ.
ನೀರು ದುರುಪಯೋಗವಾದರೆ ಲಕ್ಷ ದಂಡ
ನವದೆಹಲಿ, ಅ. 23: ಕುಡಿಯುವ ನೀರನ್ನು ದುರುಪಯೋಗ ಮಾಡುವುದು ಭಾರತದಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಉಲ್ಲಂಘಿಸುವವರಿಗೆ ರೂ. 1 ಲಕ್ಷವರೆಗೆ ದಂಡ ಮತ್ತು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಕೇಂದ್ರದ ಹೊಸ ನಿರ್ದೇಶನ ತಿಳಿಸಿದೆ. ಜಲಶಕ್ತಿ ಸಚಿವಾಲಯ, ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ಅಡಿಯಲ್ಲಿ ಬರುವ ಕೇಂದ್ರ ಅಂತರ್ಜಲ ಪ್ರಾಧಿಕಾರ (ಸಿಜಿಡಬ್ಲ್ಯೂಎ) 1986ರ ಪರಿಸರ (ಸಂರಕ್ಷಣೆ) ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ಈ ಅಧಿಸೂಚನೆ ಹೊರಡಿಸಿದೆ. ದೇಶದಲ್ಲಿ ನೀರಿನ ದುರ್ಬಳಕೆ ಮತ್ತು ವ್ಯರ್ಥ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವಂತೆ ಕೋರಿ ರಾಜೇಂದ್ರ ತ್ಯಾಗಿ ಮತ್ತು ಸ್ನೇಹಿತರು (ಎನ್‍ಜಿಒ) ಅರ್ಜಿ ಸಲ್ಲಿಸಿದ್ದ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನ ನೀಡಿದ ನಂತರ ಈ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡುವ ನಾಗರಿಕ ಸಂಸ್ಥೆಗಳು, ಅದು ಜಲಮಂಡಳಿ, ಜಲ ನಿಗಮ್, ಜಲಸಂಪನ್ಮೂಲ ಇಲಾಖೆ, ಮಹಾನಗರ ಪಾಲಿಕೆ, ಮುನ್ಸಿಪಲ್ ಕೌನ್ಸಿಲ್, ಅಭಿವೃದ್ಧಿ ಪ್ರಾಧಿಕಾರ, ಪಂಚಾಯಿತಿ ಅಥವಾ ನೀರು ಸರಬರಾಜು ಮಾಡುವು ಇನ್ನಾವುದೇ ಸಂಸ್ಥೆ ಕುಡಿಯುವ ನೀರು ವ್ಯರ್ಥವಾಗುತ್ತಿಲ್ಲ ಅಥವಾ ದುರುಪಯೋಗವಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ದುರುಪಯೋಗವಾಗುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ನೌಕಾಪಡೆಯಿಂದ ವೀಡಿಯೋ ಬಿಡುಗಡೆ
ನವದೆಹಲಿ, ಅ. 23: ಭಾರತೀಯ ನೌಕಾಪಡೆ ಶುಕ್ರವಾರ ಅರಬೀಯನ್ ಸಮುದ್ರದಲ್ಲಿ ನಿಖರತೆಯೊಂದಿಗೆ ಹಡಗು ವಿರೋಧಿ ಕ್ಷಿಪಣಿ ಮುಳುಗುವ ಹಡಗೊಂದನ್ನು ನಾಶಪಡಿಸುವ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ. ವಿಮಾನ ವಾಹಕ ಐಎನ್‍ಎಸ್ ವಿಕ್ರಮಾದಿತ್ಯ ಮತ್ತು ಅನೇಕ ಯುದ್ಧ ನೌಕೆಗಳು, ಹೆಲಿಕಾಪ್ಟ್‍ರ್‍ಗಳು ಮತ್ತಿತರ ನೌಕಪಡೆಯೊಂದಿಗೆ ಮೆಗಾ ನೌಕ ಕಾರ್ಯಾಚರಣೆಯ ಭಾಗವಾಗಿ ಕಾರ್ವೆಟ್ ಐಎನ್‍ಎಸ್ ಪ್ರಬಲ್‍ನಿಂದ ಈ ಕ್ಷಿಪಣಿಯನ್ನು ಹಾರಿಸಲಾಯಿತು. ಗುರಿ ಇಡಲಾಗಿದ್ದ ಹಳೆಯ ವಿಮಾನವನ್ನು ಗರಿಷ್ಠ ಸಾಂದ್ರತೆಯಲ್ಲಿ, ನಿಖರತೆಯೊಂದಿಗೆ ಕ್ಷಿಪಣಿ ಹೊಡೆದಿರುವುದಾಗಿ ಭಾರತೀಯ ನೌಕಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಕಡಲು ಆಧಾರಿತ ವಿವಿಧ ಸ್ಥಳಗಳಲ್ಲಿ ಮತ್ತು ಸಮುದ್ರದಲ್ಲಿ ತನ್ನ ಸೈನ್ಯದ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.