ಮಡಿಕೇರಿ ಅ.23 : ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ಮಡಿಕೇರಿ ದಸರಾ ಹಬ್ಬವನ್ನು ಸರ್ಕಾರ ಮತ್ತು ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಅತ್ಯಂತ ಸರಳ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲು ದಶಮಂಟಪಗಳು ಮತ್ತು ಕರಗ ಸಮಿತಿಗಳು ನಿರ್ಧರಿಸಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ದಶಮಂಟಪ ಸಮಿತಿ ಅಧ್ಯಕ್ಷ ಬಿ.ಗುರುರಾಜ್ (ಪುಟ್ಟ) ಮನವಿ ಮಾಡಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಪ್ರದಾಯದಂತೆ ಬನ್ನಿ ಕಡಿಯುವ ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು,

(ಮೊದಲ ಪುಟದಿಂದ) ಜಿಲ್ಲಾಡಳಿತದ ಸೂಚನೆಯಂತೆ ಒಂದು ಪಿಕ್‍ಅಪ್ ವಾಹನÀ ಅಥವಾ ಮುಂಭಾಗದ ಟ್ರ್ಯಾಕ್ಟರ್ ಇಂಜಿನ್‍ನಲ್ಲಿ ಕಳಶ ಮತ್ತು ದೇವರ ಮೂರ್ತಿಯನ್ನಿಟ್ಟು ಬನ್ನಿ ಮಂಟಪಕ್ಕೆ ತೆರಳಲು ಮಂಟಪ ಸಮಿತಿಗಳು ನಿರ್ಧರಿಸಿವೆ ಎಂದು ತಿಳಿಸಿದ್ದಾರೆ. ವಿಜದಶಮಿಯಂದು ಯಾವುದೇ ರೀತಿಯ ಮಂಟಪಗಳ ಪ್ರದರ್ಶನ ಹಾಗೂ ಬಹುಮಾನಕ್ಕೆ ಅವಕಾಶ ಇರುವುದಿಲ್ಲ. ಅತ್ಯಂತ ಸರಳ ರೀತಿಯಲ್ಲಿ ಹತ್ತು ಮಂಟಪ ಸಮಿತಿಗಳು ಕಳಶ ಮತ್ತು ನಾಲ್ಕು ಶಕ್ತಿ ದೇವತೆಗಳು ಕರಗದೊಂದಿಗೆ ಬನ್ನಿ ಮಂಟಪಕ್ಕೆ ತೆರಳಿ ಸಂಪ್ರದಾಯದಂತೆ ಬನ್ನಿ ಕಡಿಯುವ ಮೂಲಕ ದಸರಾ ಹಬ್ಬಕ್ಕೆ ತೆರೆ ಎಳೆಯಲಾಗುವುದು. ಈ ಬಾರಿ ಕೊರೊನಾದಿಂದಾಗಿ ಸರಳವಾಗಿ ಆಚರಿಸುತ್ತಿದ್ದು, ಮುಂದಿನ ಸಾಲಿನಿಂದ ವಿಜೃಂಭಣೆಯ ದಸರಾ ಆಚರಿಸಲಾಗುವುದೆಂದು ತಿಳಿಸಿದರು.

ಇಂದು ಕೋವಿಡ್ ಪರೀಕ್ಷೆ

ಕರಗ ಮತ್ತು ಕಳಶದೊಂದಿಗೆ ಸಾಗುವ ಮಂಟಪ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಅ.24 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಪರೀಕ್ಷೆ ನಡೆಯಲಿದೆ. ಕೋವಿಡ್ ಪರೀಕ್ಷಾ ವರದಿ ತರುವುದು ಕಡ್ಡಾಯವಾಗಿದ್ದು, ಕಳಶ ಕೊಂಡೊಯ್ಯುವಾಗ ಒಂದು ದೇವಾಲಯದಿಂದ 20 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ ಎಂದು ಗುರುರಾಜ್ ಮಾಹಿತಿ ನೀಡಿದ್ದಾರೆ.

ಕರಗ ಹಾಗೂ ಕಳಶ ಸಾಗುವ ಮುಖ್ಯ ಬೀದಿಗಳಲ್ಲಿ ಹೆಚ್ಚುವರಿ ವಿದ್ಯುತ್ ದೀಪದ ಬೆಳಕಿನ ವ್ಯವಸ್ಥೆಯನ್ನು ಜಿಲ್ಲಾಡಳಿತ, ನಗರಸಭೆ ಮತ್ತು ದಸರಾ ಸಮಿತಿ ಮಾಡಬೇಕು. ಕೋವಿಡ್ ಸಂಕಷ್ಟದ ಪರಿಸ್ಥಿತಿ ಇರುವುದರಿಂದ ದಸರಾಕ್ಕಾಗಿ ಸಾರ್ವಜನಿಕರಿಂದ ಯಾವುದೇ ವಂತಿಗೆ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಡಳಿತ ಹಾಗೂ ದಸರಾ ಸಮಿತಿ ಸರ್ಕಾರದಿಂದ ಬರುವ ಅನುದಾನವನ್ನು ವಿಜಯದಶಮಿಯೊಳಗೆ ಆಯಾ ದೇವಾಲಯಗಳ ಮಂಟಪ ಮತ್ತು ಕರಗ ಸಮಿತಿಗಳಿಗೆ ನೀಡಬೇಕೆಂದು ಅವರು ಕೋರಿದ್ದಾರೆ.

ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಮತ್ತು ಜಿಲ್ಲಾಡಳಿತ ನೀಡಿರುವ ಮಾರ್ಗಸೂಚಿಯನ್ನು ಪಾಲಿಸುವುದು ದಶಮಂಟಪ ಸಮಿತಿಗಳಿಗೆ ಅನಿವಾರ್ಯವಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಗುರುರಾಜ್ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ : 98457 59050 ನ್ನು ಸಂಪರ್ಕಿಸಬಹುದಾಗಿದೆ.