ಕರಿಕೆ, ಅ. 23: ತೋಟದೊಳಗಡೆ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಮರಕ್ಕೆ ಕಟ್ಟಿ ಇರಿಸಿದ್ದ ಕೋವಿಯೊಂದು ಸಿಡಿದು ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಕರಿಕೆ ಬಳಿಯ ಎಳ್ಳುಕೊಚ್ಚಿ ಬಳಿಯ ಕುಡಿಯಂಗಲ್‍ನ ಹತ್ತು ಎಕರೆ ರಬ್ಬರ್ ತೋಟದಲ್ಲಿ ಮರವೊಂದಕ್ಕೆ ಕೋವಿಯನ್ನು ಕಟ್ಟಿ ಪ್ರಾಣಿಗಳು ಸಂಚರಿಸುವಾಗ ಕೋವಿಯ ನಳಿಕೆಗೆ ಕಟ್ಟಲಾಗಿರುವ ಹಗ್ಗಕ್ಕೆ ತಗುಲಿ ಕೋವಿ ಸ್ವಯಂಚಾಲಿತವಾಗಿ ಸಿಡಿಯುವಂತೆ ಇರಿಸಲಾಗಿತ್ತೆನ್ನಲಾಗಿದೆ. ಈ ವಿಚಾರ ತಿಳಿಯದ ವ್ಯಕ್ತಿಯೋರ್ವರು ತೋಟದಲ್ಲಿ ಸಂಚರಿಸುವಾಗ ಕೋವಿ ಸಿಡಿದಿದ್ದು, ತೊಡೆ ಭಾಗಕ್ಕೆ ಗಾಯವಾಗಿದೆ. ತೋಟದ ಮಾಲೀಕರೇ ಗಾಯಗೊಂಡಾತನನ್ನು ನೆರೆಯ ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಬಿದ್ದು ಗಾಯವಾಗಿರುವದಾಗಿ ಹೇಳಿಕೆ ನೀಡಲಾಗಿದೆ. ಅಲ್ಲದೇ. ಈ ಬಗ್ಗೆ ಯಾರೂ ಕೂಡ ದೂರು ದಾಖಲಿಸದೇ ಇರುವದರಿಂದಾಗಿ ಯಾವದೇ ಮೊಕದ್ದಮೆ ದಾಖಲಾಗಿಲ್ಲ. ಆದರೆ, ಕೋವಿ ಪರವಾನಗಿ ರಹಿತವಾಗಿದ್ದು, ಕೋವಿಯನ್ನು ಕರಿಕೆ ಪೊಲೀಸರು ವಶಪಡಿಸಿಕೊಂಡಿರುವದಾಗಿ ತಿಳಿದು ಬಂದಿದೆ.
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಡಿವೈಎಸ್‍ಪಿ ದಿನೇಶ್‍ಕುಮಾರ್ ಅವರು, ಘಟನೆ ಸಂಭವಿಸಿದ್ದರೂ ಯಾರೂ ಕೂಡ ದೂರು ನೀಡದಿರುವ ಹಿನ್ನೆಲೆಯಲ್ಲಿ ಮೊಕದ್ದಮೆ ದಾಖಲಿಸಲಾಗಿಲ್ಲ. ವೈದ್ಯಕೀಯ ಪರೀಕ್ಷಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದ್ದಾರೆ.
-ಸುಧೀರ್