ಸೋಮವಾರಪೇಟೆ, ಅ. 23: ಮೈಸೂರಿನ ಓಡಿಪಿ ಹಾಗೂ ನಬಾರ್ಡ್ ಸಂಸ್ಥೆಗಳ ಆಶ್ರಯದಲ್ಲಿ ಸಮೀಪದ ಹಾನಗಲ್ಲು ಗ್ರಾಮದ ಸಮುದಾಯ ಭವನದಲ್ಲಿ ನೈರ್ಮಲ್ಯ ಸಾಕ್ಷಾರತಾ ಅಭಿಯಾನ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ನಬಾರ್ಡಿನ ಕೊಡಗು ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಶ್ರೀನಿವಾಸ್ ಉದ್ಘಾಟಿಸಿದರು. ನಂತರ ಮಾತನಾಡಿ, ಸಮುದಾಯ ಮತ್ತು ವೈಯುಕ್ತಿಕ ನೈರ್ಮಲ್ಯತೆಯನ್ನು ಕಾಪಾಡುವುದರ ಮೂಲಕ ದೇಶವನ್ನು ಆರೋಗ್ಯಕರ ಸಮಾಜವನ್ನಾಗಿ ಪರಿವರ್ತಿಸಬೇಕಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರಮುಖ ಯೋಜನೆಯಾದ ಸ್ವಚ್ಛ ಭಾರತ್ ಅಭಿಯಾನದಡಿ ಸಂಸ್ಥೆಯ ವತಿಯಿಂದ ವಾಶ್ (ವಾಟರ್ ಏಂಡ್ ಸಾನಿಟೇಷನ್) ಸಾಕ್ಷರತಾ ಅಭಿಯಾನವನ್ನು ಕರ್ನಾಟಕ ರಾಜ್ಯದ 100 ಹಳ್ಳಿಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಅಧಿಕಾರಿ ಗುರುಶಾಂತಮ್ಮ ಮಾತನಾಡಿ, ಕೊರೊನಾ ವೈರಸ್ ಹಾವಳಿಯಿಂದ ಜನ ಜೀವನ ತತ್ತರಿಸಿಹೋಗಿದ್ದು, ಎಲ್ಲರೂ ತಮ್ಮ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಮ್ಮ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಶೌಚಾಲಯ ಬಳಸುವ ಮೂಲಕÀ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದರು.
ಸಂಪನ್ಮೂಲ ವ್ಯಕ್ತಿಯಾಗಿ ಓಡಿಪಿ ಸಂಸ್ಥೆಯ ಗ್ರಾಮ ವಿಕಾಸ ಪುರುಷ ಒಕ್ಕೂಟದ ಸಂಯೋಜಕ ಜಾನ್ ಬಿ. ರಾಡ್ರಿಗಸ್ ಭಾಗವಹಿಸಿದ್ದರು. ಆರೋಗ್ಯ ಇಲಾಖೆಯ ಎ.ಎನ್.ಎಂ. ಗೀತಾ, ಪ್ರಕೃತಿ ಜಲಾನಯನ ಸಮಿತಿ ಅಧ್ಯಕ್ಷ ರಾಜು ಪೊನ್ನಪ್ಪ, ಗ್ರಾಮದ ಪ್ರಮುಖರಾದ ಜೋಯಪ್ಪ ಮತ್ತಿತರರು ಇದ್ದರು.