ಗೋಣಿಕೊಪ್ಪ ವರದಿ, ಅ. 23: ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಮಣ್ಣು ಪರೀಕ್ಷೆ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪ್ರಭಾಕರ್ ಸಲಹೆ ನೀಡಿದರು.

ಇತ್ತೀಚೆಗೆ ಕೆವಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಮಣ್ಣು ಪರೀಕ್ಷೆ ವಿಧಾನದ ಕಾರ್ಯಾಗಾರದಲ್ಲಿ ಸಲಹೆ ನೀಡಿದರು. ಮಣ್ಣು ಪರೀಕ್ಷೆಯಿಂದ ಕೃಷಿಗೆ ಹೆಚ್ಚು ಅನುಕೂಲತೆ ಇದೆ. ಮಣ್ಣಿನ ರಸಸಾರ, ಆಮ್ಲೀಯ ಗುಣ, ಪೋಶಕಾಂಶವನ್ನು ಅರಿತು ಮಣ್ಣಿಗೆ ಗೊಬ್ಬರ, ಸುಣ್ಣ ನೀಡಬೇಕಿದೆ. ಆಮ್ಲೀಯ ಹೆಚ್ಚಾದಂತೆ ಭೂಮಿ ಗೊಬ್ಬರವನ್ನು ತೆಗೆದುಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತದೆ. ಇದರಿಂದ ಕೃಷಿ ಬೆಳೆ, ಮಣ್ಣು ಹಾಗೂ ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಮಣ್ಣಿನ ಫಲವತ್ತತೆ ಅರಿತು ಭವಿಷ್ಯದಲ್ಲಿ ಕೃಷಿಗೆ ಪೂರಕವಾಗುವಂತೆ ಮಣ್ಣಿನ ಅಂಶವನ್ನು ಉಳಿಸಿಕೊಳ್ಳಲು ಯೋಜನೆ ರೂಪಿಸಿಕೊಳ್ಳಬೇಕು. ಮಣ್ಣು ಪರೀಕ್ಷೆ ಕಡ್ಡಾಯ ಎಂಬ ನಿಯಮವನ್ನು ಬೆಳೆಗಾರರೇ ಸ್ವಯಂಪ್ರೇರಿತವಾಗಿ ರೂಡಿಸಿಕೊಳ್ಳಬೇಕು ಎಂದರು.

ಮಾಲ್ದಾರೆ ಬುಡಕಟ್ಟು ಕಾಫಿ ಬೆಳೆಗಾರ ಸಂಘದ ಸದಸ್ಯರು ಪಾಲ್ಗೊಂಡರು. ಮಾವು, ಸೀಬೆ, ತರಕಾರಿ ಬೀಜ, ಹಣ್ಣುಗಳ ಗಿಡ ವಿತರಣೆ ಮಾಡಲಾಯಿತು.