ಮಡಿಕೇರಿ, ಅ. 23: ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಮಡಿಕೇರಿ ಜಿಲ್ಲಾ ನೆಹರು ಯುವ ಕೇಂದ್ರದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ 2019-20ನೇ ಸಾಲಿನ ಜಿಲ್ಲಾ ಅತ್ಯುತ್ತಮ ಯುವಕ ಸಂಘ, ಯುವತಿ ಮಂಡಳಿ, ಮಹಿಳಾ ಮಂಡಳಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸಂಘ ಸಂಸ್ಥೆಗಳ ನೋಂದಣಿ ಅಧಿನಿಯಮ 1960 ರ ಪ್ರಕಾರ ನೋಂದಣಿಯಾಗಿ ನೆಹರು ಯುವ ಕೇಂದ್ರದಲ್ಲಿ ಮಾನ್ಯತೆ ಪಡೆದು ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಕ್ರಿಯಾತ್ಮಕವಾದ ಚಟುವಟಿಕೆಗಳ ಮೂಲಕ ಪರಿಸರ, ಗ್ರಾಮ ನೈರ್ಮಲ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸಮುದಾಯದ, ಗ್ರಾಮದ ಅಭಿವೃದ್ಧಿಗೆ ನಿಸ್ವಾರ್ಥತೆಯಿಂದ ಸೇವೆಯನ್ನು ಸಲ್ಲಿಸಿರುವ ಯುವಕ ಸಂಘ, ಯುವತಿ ಮಂಡಳಿ, ಮಹಿಳಾ ಮಂಡಳಿಯನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ “ಯುವ ಸಂಘ ಪ್ರಶಸ್ತಿ” ನೀಡಲಾಗುವುದು. ಪ್ರಶಸ್ತಿಯು ರೂ.25 ಸಾವಿರ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸಂಘ/ಮಂಡಳಿಯನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು.
ಯುವ ಸಂಘಗಳು ಕಳೆದ ವರ್ಷ ಅಂದರೆ 2019ರ ಏಪ್ರಿಲ್ 1 ರಿಂದ 2020ರ ಮಾರ್ಚ್ 31 ರ ಅವಧಿಯಲ್ಲಿ ಸಮುದಾಯದ ಬೆಳವಣಿಗೆಗೆ ಸಲ್ಲಿಸಿರುವ ಸ್ವಯಂ ಸೇವಾ ಕಾರ್ಯಗಳ ದೃಢೀಕರಣ ಪತ್ರಗಳು, ಭಾವಚಿತ್ರ, ಪತ್ರಿಕಾ ತುಣುಕುಗಳು ಮತ್ತಿತರ ವಿವರಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಿದೆ.
ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳ ಕಾರ್ಯಾಲಯ ನೆಹರು ಯುವ ಕೇಂದ್ರ, ಯಶು ನಿಲಯ, ಬ್ಲಾಕ್ ನಂ:08, ಕಾವೇರಿ ಲೇಔಟ್, ಮಡಿಕೇರಿ-571201 ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಎಲ್ಲಾ ದಾಖಲೆಗಳೊಂದಿಗೆ ನವೆಂಬರ್ 5 ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ದೂ. 08272-225470 ನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್. ಸಿದ್ದರಾಮಪ್ಪ ತಿಳಿಸಿದ್ದಾರೆ.