ಸಿದ್ದಾಪುರ, ಅ. 23: ಓಡಿಪಿ ಸಂಸ್ಥೆ ಮೈಸೂರು ಹಾಗೂ ಜರ್ಮನಿಯ ಅಂದೇರಿಹಿಲ್ಪೆ ಸಂಸ್ಥೆಯ ವತಿಯಿಂದ ನೋಂದಾಯಿತ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉಚಿತ ಗೊಬ್ಬರ ವಿತರಣೆ ಕಾರ್ಯಕ್ರಮವು ಸಿದ್ದಾಪುರದ ಸೆಂಟನರಿ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಿದ್ದಾಪುರದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಓಡಿಪಿ ಸಂಸ್ಥೆಯು ಸಮಾಜ ಸೇವೆಯೊಂದಿಗೆ ರೈತರಿಗೆ ಉಚಿತವಾಗಿ ಗೊಬ್ಬರ ವಿತರಣೆ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರೈತರು ತಮ್ಮ ಭೂಮಿಯಲ್ಲಿ ನಿರ್ಲಕ್ಷ್ಯತನ ಮಾಡದೇ ಕೃಷಿಯೊಂದಿಗೆ ಇತರ ಉಪ ಕಸುಬುಗಳನ್ನು ಮಾಡುವ ಮೂಲಕ ತಮ್ಮ ಜೀವನವನ್ನು ಉನ್ನತೀಕರಣ ಮಾಡಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಓಡಿಪಿ ಸಂಸ್ಥೆಯ ಮೈಸೂರು ಜಿಲ್ಲೆಯ ಸಂಯೋಜಕ ಜಾನ್ಸನ್ ಮಾತನಾಡಿ, ಓಡಿಪಿ ಸಂಸ್ಥೆ ಹಾಗೂ ಜರ್ಮನಿಯ ಅಂದೇರಿಹಿಲ್ಪೆ ಸಂಸ್ಥೆ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಗುರುತಿಸಿ ಅವರುಗಳಿಗೆ ಉಚಿತ ಗೊಬ್ಬರವನ್ನು ನೀಡುತ್ತಿದೆ. ಎಂದರು. ಸಂಸ್ಥೆಯಲ್ಲಿ ನೋಂದಾಯಿತ ರೈತರಿಗೆ ಮುಂದಿನ ದಿನಗಳಲ್ಲಿ ಬಿತ್ತನೆ ಬೀಜ, ಔಷಧಿ ಮಾರುಕಟ್ಟೆ ಹೆಚ್ಚಿಸುವ ಯೋಜನೆಯನ್ನು ರೂಪಿಸಲಾಗುವುದು ಎಂದರು.

ಕೊಡಗು ಜಿಲ್ಲಾ ಓಡಿಪಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನಾಜಸ್ ಮಾತನಾಡಿ, ಕೋವಿಡ್-19 ಪ್ರಾರಂಭವಾದ ನಂತರ ಸಣ್ಣ ಹಾಗೂ ಅತಿ ಸಣ್ಣ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆ ಓಡಿಪಿ ಸಂಸ್ಥೆಯು, ಜರ್ಮನಿಯ ಅಂದೇರಿಹಿಲ್ಪೆ ಸಂಸ್ಥೆಯ ಸಹಕಾರದಿಂದ ನೋಂದಾಯಿತ ರೈತರಿಗೆ ಉಚಿತ ಗೊಬ್ಬರಗಳನ್ನು ನೀಡಿದೆ. ಮುಂದಿನ ದಿನಗಳಲ್ಲಿ ನಬಾರ್ಡ್ ಮೂಲಕ ರೈತರು ಅಣಬೆ ಇನ್ನಿತರ ಕೃಷಿಗಳನ್ನು ಮಾಡುವ ಮೂಲಕ ಅವುಗಳನ್ನು ಕೃಷಿ ಉತ್ಪನ್ನ ಘಟಕದ ಮೂಲಕ ಮಾರಾಟ ಮಾಡಲು ಘಟಕಗಳನ್ನು ತೆರೆಯಲಾಗುವುದೆಂದು ತಿಳಿಸಿದರು.

ಕೃಷಿ ಇಲಾಖೆಯ ಅಧಿಕಾರಿ ರಾಮಚಂದ್ರ ಮಾತನಾಡಿ, ಸರಕಾರದ ವತಿಯಿಂದ ಕೃಷಿ ಇಲಾಖೆಯ ಮುಖಾಂತರ ರೈತರಿಗೆ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಸದಸ್ಯೆ ಚಿನ್ನಮ್ಮ ವಹಿಸಿದ್ದರು. ಇದೇ ಸಂದರ್ಭ ಸಿದ್ದಾಪುರ, ಮಾಲ್ದಾರೆ, ನೆಲ್ಲಿಹುದಿಕೇರಿ ವ್ಯಾಪ್ತಿಯ 70 ಮಂದಿ ನೋಂದಾಯಿತ ರೈತರಿಗೆ ಗೊಬ್ಬರಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ರಾಣಿ, ನೆಲ್ಲಿಹುದಿಕೇರಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಸೆಫಿಯಾ, ಓಡಿಪಿ ಸಂಸ್ಥೆಯ ಧನುಕುಮಾರ್, ವಿಜಯ ನಾರಾಯಣ ಇನ್ನಿತರರು ಹಾಜರಿದ್ದರು. ಕಾರ್ಯಕ್ರಮ ಮುಂಚಿತ ಪರಿಸರ ಉಳಿಸುವ ನಿಟ್ಟಿನಲ್ಲಿ ಪರಿಸರದ ಬಗ್ಗೆ ಪ್ರತಿಜ್ಞೆ ಬೋಧಿಸಿ ಸ್ವೀಕರಿಸಲಾಯಿತು. ವಿಜಯ ನಾರಾಯಣ ಸ್ವಾಗತಿಸಿ, ವಂದಿಸಿದರು.