ಮಡಿಕೇರಿ, ಅ. 23: ಬೆಂಗಳೂರಿನಿಂದ ಮಡಿಕೇರಿಗೆ ಬರುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ (ಕೆ.ಎ. 21. ಎಫ್.0025) ತಾ. 19 ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರಯಾಣಿಕನೊಬ್ಬ ಮಾಸ್ಕ್ ಧರಿಸಲು ಹೇಳಲಾಗಿ, ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಕೃತ್ಯ ಸಂಭವಿಸಿದೆ. ಮಡಿಕೇರಿ ಡಿಪೋ ನಿರ್ವಾಹಕ ಟಿ.ಕೆ. ಚಂದ್ರಶೇಖರ್ ನೀಡಿರುವ ಪುಕಾರು ಮೇರೆಗೆ ರಾಮನಗರಪುರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಘಟನೆ ಬಗ್ಗೆ ಅಲ್ಲಿನ ಠಾಣಾಧಿಕಾರಿ ಹೇಮಂತ್‍ಕುಮಾರ್ ಮೊಕದ್ದಮೆ ದಾಖಲಿಸಿಕೊಂಡು, ಫರಾಕ್ ಎಂಬಾತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿ ಮಾಸ್ಕ್ ಧರಿಸಲು ನಿರಾಕರಿಸಿದ್ದಲ್ಲದೆ, ನಿರ್ವಾಹಕರನ್ನು ಥಳಿಸಿ ಅವಾಚ್ಯವಾಗಿ ನಿಂಧಿಸಿರುವ ಕುರಿತು ಪೊಲೀಸರು ಪೊಲೀಸ್ ಕಾಯ್ದೆ 269,270,353, 332, 504, 506ರ ಪ್ರಕಾರ ಕ್ರಮಕೈಗೊಂಡಿದ್ದಾರೆ.