ವೀರಾಜಪೇಟೆ, ಅ. 22: ವೀರಾಜಪೇಟೆಯ ಮಿನಿ ವಿಧಾನಸೌಧದ ಎರಡು ಅಂತಸ್ತುಗಳ ನಿರ್ಮಾಣಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಬೋಪಯ್ಯ ಅವರು, ಈಗಾಗಲೇ ನೆಲ ಮಾಳಿಗೆ ಕಟ್ಟಡ ಪೂರ್ಣಗೊಂಡಿರುವುದರಿಂದ ಆರು ಕೋಟಿ ವೆಚ್ಚದಲ್ಲಿ ಎರಡು ಅಂತಸ್ತುಗಳ ಕಟ್ಟಡ ನಿರ್ಮಾಣವಾಗಲಿದೆ. ಮೊದಲ ಅಂತಸ್ತು 900 ಚದರ ಮೀಟರ್ ಇದ್ದು ಈ ಅಂತಸ್ತಿನಲ್ಲಿ ಸಬ್‍ರಿಜಿಸ್ಟಾರ್ ಕಚೇರಿ, ಸರ್ವೇ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಿಗೆ ಸ್ಥಳ ನಿಗದಿ ಮಾಡಲಾಗಿದೆ. ಅದೇ ರೀತಿಯಲ್ಲಿ ಎರಡನೇ ಅಂತಸ್ತು 900 ಚದರ ಮೀಟರ್‍ನ್ನೊಳಗೊಂಡಿದ್ದು ಈ ಅಂತಸ್ತಿನಲ್ಲಿ ಮಕ್ಕಳ ಕಾರ್ಮಿಕಾಧಿüಕಾರಿ, ಶಾಸಕರ ಕೊಠಡಿ, ಸಿ.ಟಿ.ಒ, ಅಬ್ಕಾರಿ ಅಧೀಕ್ಷರ ಕಚೇರಿ, ವಲಯ ಕಚೇರಿಗೆ ಸ್ಥಳಾವಕಾಶ ನೀಡಲಾಗಿದೆ. ತಾಲೂಕಿನ ಎಲ್ಲ ಕಚೇರಿಗಳು ಒಂದೇ ಕಟ್ಟಡದಲ್ಲಿರಬೇಕೆಂಬ ಉದ್ದೇಶದಿಂದ 1800 ಚದರ ಮೀಟರ್‍ನ ಅಚ್ಚುಕಟ್ಟಾದ ಕಟ್ಟಡವನ್ನು ನಿರ್ಮಿಸಲಾಗುವುದು, ಮುಂದಿನ ಹದಿನೆಂಟು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುನಾಣಯ್ಯ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಸುವಿನ್ ಗಣಪತಿ ತಹಶೀಲ್ದಾರ್ ನಂದೀಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಸಹಾಯಕ ಯತೀಶ್ ಪಟ್ಟಣ ಪಂಚಾಯಿತಿ ಸದಸ್ಯರು ಹಾಜರಿದ್ದರು.