ಸಿದ್ದಾಪುರ, ಅ. 22: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ರೈತರ ಸಂವಾದ ಕಾರ್ಯಕ್ರಮವು ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯಿತು. ಕಾರ್ಯ ಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಖಜಾಂಚಿ ಸಬಿತಾ ಭೀಮಯ್ಯ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಕಾನೂನು ಸಲಹೆಗಾರರಾದ ಕೆ.ಬಿ ಹೇಮಚಂದ್ರ ಮಾತನಾಡಿ ರೈತರಿಗೆ ತಾವು ಬೆಳೆಸಿದ ಮರಗಳ ಮೇಲಿನ ಹಕ್ಕುಗಳನ್ನು ಸರ್ಕಾರ ನೀಡಬೇಕು ಹಾಗೂ ರೈತರಿಗೆ ಕೋವಿಯ ಪರವಾ ನಗಿಯನ್ನು ನೀಡಲು ಒತ್ತಾಯಿಸಿದರು. ಕೋವಿಯ ಪರವಾನಗಿಯನ್ನು ನೀಡಲು ಅಧಿಕಾರಿ ಗಳು ಸತಾಯಿಸ ದಂತೆ ಆಗ್ರಹಿಸಿದರು. ಮರದ ಮಾಲೀಕತ್ವದ ಬಗ್ಗೆ ಜಿಲ್ಲೆಗೆ ಪ್ರತ್ಯೇಕ ಕಾನೂನು ರೂಪಿಸಿರುವುದು ಸರಿಯಾದ ಕ್ರಮವಲ್ಲ ಎಂದ ಅವರು ಜಿಲ್ಲೆಗೆ ಮರದ ಹಕ್ಕನ್ನು ರೈತರು ಪಡೆಯಲು ಇಲ್ಲದ ಸಲ್ಲದ ನಿಬಂಧನೆಗಳನ್ನು ತಿಳಿಸಿ ರೈತರುಗಳನ್ನು ಇಲಾಖೆಗಳು ಸತಾಯಿಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜೆಯ್ ಬೋಪಯ್ಯ ಮಾತನಾಡಿ ರೈತರುಗಳಿಗೆ ಕಡಿಮೆ ಆದಾಯವಿದ್ದರೂ ಕೂಡ ರೈತರು ಸರ್ಕಾರಕ್ಕೆ ತೆರಿಗೆ ಹಣವನ್ನು ಪಾವತಿಸುತ್ತಿದ್ದಾರೆ. ಆದರೆ ಬಂಡವಾಳ ಶಾಹಿಗಳ ಆದಾಯವು ಹೆಚ್ಚಾಗುತ್ತಿದ್ದರೂ ಕೂಡ ಅವರುಗಳು ತೆರಿಗೆ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.

ಅಮ್ಮತ್ತಿಯ ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಗಣಪತಿ ಮಾತನಾಡಿ ರೈತರು ತಮ್ಮ ಜಮೀನಿನಲ್ಲಿ ತಾವು ಬೆಳೆಸಿದ ಮರಗಳನ್ನು ತಮ್ಮ ಸ್ವಂತ ಉಪಯೋಗಕ್ಕೆ ಬಳಸಲು ಅಧಿಕಾರಿಗಳ ಬಳಿ ತೆರಳಿದರೆ ಸಾಕಷ್ಟು ದಾಖಲಾತಿ ಗಳನ್ನು ಪಡೆದುಕೊಂಡು ನಂತರ ರೈತರನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ ಅಮ್ಮತ್ತಿ ಹೋಬಳಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಮಂಡೇಪಂಡ ಪ್ರವೀಣ್ ಬೋಪಯ್ಯ ಮಾತನಾಡಿ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.

ಇದೇ ಸಂದರ್ಭ ಸುಂಟಿಕೊಪ್ಪ ಕೊಡಗರಳ್ಳಿ ತೋಟದಲ್ಲಿ ಮರಗಳ್ಳತನ ಮಾಡಲು ಯತ್ನಿಸಿದ ಆರೋಪಿಗಳನ್ನು ಬೆನ್ನಟ್ಟಿ ಸಾಹಸ ಮೆರೆದ ದೀಪಕ್ ಬಸವರಾಜ್ ಅವರನ್ನು ರೈತ ಸಂಘದ ವತಿಯಿಂದ “ಶೂರ ರೈತ” ಎಂಬ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಅಮ್ಮತ್ತಿ ಹೋಬಳಿ ರೈತ ಸಂಘದ ಉಪಾಧ್ಯಕ್ಷ ಬುಟ್ಟಿಯಂಡ ಹರಿ ಸೋಮಯ್ಯ ಹಾಗೂ ಜಿಲ್ಲಾ ಖಜಾಂಚಿ ಸಬಿತಾ ಭೀಮಯ್ಯ ಹಾಗೂ ಇನ್ನಿತರರು ಹಾಜರಿದ್ದರು. ಕೆ.ಎಸ್. ಸುನಿಲ್ ಸ್ವಾಗತಿಸಿ ವಂದಿಸಿದರು.