ಮಡಿಕೇರಿ, ಅ. 22: ಕೊಡಗು ಜಿಲ್ಲೆಯ ಏಕೈಕ ನಗರಸಭೆಯಾಗಿ ರುವುದು ಜಿಲ್ಲಾ ಕೇಂದ್ರವಾದ ಮಡಿಕೇರಿ ಮಾತ್ರ. ಮಡಿಕೇರಿ ನಗರಸಭೆಯ ಹಿಂದಿನ ಚುನಾಯಿತ ಸದಸ್ಯರನ್ನು ಒಳಗೊಂಡ ಆಡಳಿತ ಮಂಡಳಿಯ ಅಧಿಕಾರಾವಧಿ ಮುಕ್ತಾಯಗೊಂಡು 2021ನೇ ಮಾರ್ಚ್ಗೆ ಸುದೀರ್ಘ ಎರಡು ವರ್ಷ ಪೂರ್ಣಗೊಳ್ಳಲಿದೆ. ಆದರೆ ಈ ಸ್ಥಳೀಯ ಸಂಸ್ಥೆಗೆ ಚುನಾವಣೆ ಏತಕ್ಕಾಗಿ ನಡೆಯುತ್ತಿಲ್ಲ ಎಂಬುದು ಒಂದು ರೀತಿಯಲ್ಲಿ ‘ನಿಗೂಢ’ ವಾಗಿರುವುದು ಗಮನಾರ್ಹ. ಪ್ರಸ್ತುತದ ಸನ್ನಿವೇಶದಲ್ಲಿ ಕೊರೊನಾ ಎಂಬ ಕಾರಣವಿದೆಯಾದರೂ ಇದರ ಆಡಳಿತ ಮುಗಿದಿದ್ದು 2019 ರ ಮಾರ್ಚ್ನಲ್ಲಿ ಆದರೆ ಕೊರೊನಾ ಕಾಣಿಸಿಕೊಂಡಿರುವದು 2020 ರ ಮಾರ್ಚ್ ಬಳಿಕ. 2020 ರ ಮಾರ್ಚ್ನ ನಂತರ ಈ ತನಕದ ಬೆಳವಣಿಗೆ ಬೇರೆಯದ್ದೇ ಆದರೂ ಅವಧಿ ಮುಕ್ತಾಯಗೊಂಡು ಸುಮಾರು ಒಂದು ವರ್ಷ ಅಂದರೆ 2020 ರ ಮಾರ್ಚ್ ತನಕವೂ ಚುನಾವಣೆ ಏತಕ್ಕೆ ನಡೆದಿರಲಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.ಏನಾಗಿತ್ತು...
ನಗರಸಭೆಯ ಆಡಳಿತ ಮಂಡಳಿಯ ಅವಧಿ ಮುಕ್ತಾಯದ ಹಂತ ತಲುಪಿದ್ದ ಸಂದರ್ಭದಲ್ಲಿ ಮತ್ತೊಂದು ಚುನಾವಣೆಯ ಸಿದ್ಧತೆ ನಡೆದಿತ್ತು. ಇದರಂತೆ ನಗರ ವ್ಯಾಪ್ತಿಯ ವಿವಿಧ ವಾರ್ಡ್ಗಳಿಗೆ ಮೀಸಲಾತಿ ನಿಗದಿಯನ್ನು ನಗರಸಭೆಯ ಮೂಲಕ ಮಾಡ ಲಾಗಿತ್ತು. ಆದರೆ ವಾರ್ಡ್ವಾರು ಮೀಸಲಾತಿ ಹಾಗೂ ಮತದಾರರ ಕ್ಷೇತ್ರ ವ್ಯಾಪ್ತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಇದು ಅಸಮರ್ಪಕ ವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ
(ಮೊದಲ ಪುಟದಿಂದ) ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.
ನಗರಸಭೆಯ ಮಾಜಿ ಸದಸ್ಯರು ಗಳಾದ ಎ.ಸಿ. ಚುಮ್ಮಿ ದೇವಯ್ಯ, ಅಶ್ರಫ್, ಶ್ರೀಮತಿ ಬಂಗೇರ ಹಾಗೂ ಸತೀಶ್ ಅವರುಗಳು ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣಾ ಪ್ರಕ್ರಿಯೆ ಮುಂದುವರಿದು ಕಳೆದ 14.1.2019 ರಲ್ಲಿ ನ್ಯಾಯಾಲಯ ಮೀಸಲಾತಿ ಕುರಿತಾಗಿ ಒಂದು ಆದೇಶವನ್ನು ನೀಡಿತ್ತು. ಅದಾಗಲೇ ನಿಗದಿಪಡಿಸಿದ್ದ ಮೀಸಲಾತಿ - ಮತದಾರರ ಪಟ್ಟಿಯ ಕುರಿತಾಗಿ ಮರುಪರಿಶೀಲನೆ ನಡೆಸುವಂತೆ ಸೂಚಿಸಿ ಈ ಕುರಿತಾಗಿ ಮುಂದಿನ 14 ದಿನಗಳಲ್ಲಿ ಅಂದರೆ 28.1.2019 ರೊಳಗೆ ವರದಿ ನೀಡಲು ನಿರ್ದೇಶನವನ್ನು ಚುನಾವಣಾ ಆಯೋಗಕ್ಕೆ ನೀಡಿತ್ತು.
ಇದರ ಬಳಿಕ ಏನೂ ಮಾಹಿತಿಯಿಲ್ಲ...
ನ್ಯಾಯಾಲಯ ಸೂಚನೆ ನೀಡಿದ ವಿಚಾರ ಸರಕಾರದ ಮಟ್ಟದಿಂದ ಇತ್ಯರ್ಥವಾಗಬೇಕಿದ್ದು ಇದಾದ ಬಳಿಕ ಏನಾಗಿದೆ ಎಂಬುದು ಮಾತ್ರ ಯಾರ ಗಮನಕ್ಕೂ ಬಂದಿಲ್ಲ. ಇದು ಸರಕಾರದ ಮಟ್ಟದಲ್ಲಿ ಆಗಬೇಕಾದ ವಿಚಾರವಾದ್ದರಿಂದ ನಗರಸಭೆಗೂ ಈ ಬಗ್ಗೆ ಇಲ್ಲಿಯ ತನಕವೂ ಯಾವುದೇ ಸೂಚನೆಗಳು ಬಂದಿಲ್ಲವೆನ್ನಲಾಗಿದೆ. ಅಲ್ಲದೆ ಅರ್ಜಿದಾರರಿಗೂ ತಾವು ಹೂಡಿದ್ದ ಮೊಕದ್ದಮೆಯ ಕುರಿತಾಗಿ ಹೆಚ್ಚಿನ ಯಾವ ಮಾಹಿತಿಯೂ ಇಲ್ಲ ಎನ್ನಲಾಗುತ್ತಿರುವುದು ಕೌತುಕವಾಗಿದೆ.
ಈ ಬಗ್ಗೆ ಪ್ರಸ್ತುತದ ಆಡಳಿತಾಧಿ ಕಾರಿಯಾಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಂದ ‘ಶಕ್ತಿ’ ಮಾಹಿತಿ ಬಯಸಿದಾಗ ನಗರಸಭೆಗೆ ಈ ಬಗ್ಗೆ ಇದರ ಕುರಿತಾಗಿ ಯಾವುದೇ ನಿರ್ದೇಶನ ಬಂದಿಲ್ಲ. ಇದು ಸರಕಾರದ ಮಟ್ಟದಿಂದ ಇತ್ಯರ್ಥವಾಗಬೇಕಿದೆ ಎಂದು ಹೇಳಿದರು. ಈ ನಡುವೆ ನಗರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯೂ ಪ್ರಕಟಗೊಂಡಿದೆ. ಇದೀಗ ಈ ಮೀಸಲಾತಿಯನ್ನೂ ಪ್ರಶ್ನಿಸಿ ನ್ಯಾಯಾಲಯದಲ್ಲಿ ಇದಕ್ಕೂ ತಡೆಯಾಜ್ಞೆ ಬಂದಿದೆ.
ನಗರಸಭೆಯ ಚುನಾವಣೆಯ ಕುರಿತಾಗಿ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಆಸಕ್ತ ಅಭ್ಯರ್ಥಿಗಳು ಕೂಡ ಯಾವುದೇ ವಿಚಾರವನ್ನು ಪ್ರಸ್ತಾಪಿಸದೆ ಮೌನಕ್ಕೆ ಶರಣಾಗಿರುವುದು ಯಾತಕ್ಕಾಗಿ ಎಂಬ ಪ್ರಶ್ನೆ ನಗರದ ಸಾರ್ವಜನಿಕರನ್ನು ಕಾಡುತ್ತಿದೆ. - ಶಶಿ ಸೋಮಯ್ಯ.