ಮಡಿಕೇರಿ, ಅ. 22: ಪ್ರಾಕೃತಿಕ ವಿಕೋಪ ಅಥವಾ ವನ್ಯಪ್ರಾಣಿಗಳಿಂದ ಕೃಷಿ ಫಸಲು ನಷ್ಟ ಸಂಭವಿಸಿದರೆ ಮತ್ತು ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ನೊಂದ ಕುಟುಂಬಗಳಿಗೆ ಪರಿಹಾರ ನೀಡುವ ಹಕ್ಕನ್ನು ರಾಜ್ಯ ಸರಕಾರ ಕಂದಾಯ ಇಲಾಖೆಗೆ ಹಸ್ತಾಂತರ ಗೊಳಿಸಿದೆ. ಕೃಷಿ ಇಲಾಖೆಯಿಂದ ರೈತರಿಗೆ ಸಕಾಲದಲ್ಲಿ ಪರಿಹಾರ ನೀಡುವುದು ವಿಳಂಬವಾಗಲಿರುವ ಕಾರಣ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖೆಯು ಇತ್ತ ಗಮನ ಹರಿಸಬೇಕೆಂದು ನಿರ್ದೇಶಿಸಲಾಗಿದೆ.ಸಾಮಾನ್ಯವಾಗಿ ರೈತರ ಹೊಲ, ಗದ್ದೆ, ತೋಟಗಳಲ್ಲಿ ಕೃಷಿ ಫಸಲು ನಷ್ಟ ಉಂಟಾದರೆ, ಹೋಬಳಿ ಮಟ್ಟದ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ, ಅಂದಾಜು ನಷ್ಟ ನಮೂದಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದರೊಂದಿಗೆ ರೈತರಿಗೆ ಸೂಕ್ತ ಪರಿಹಾರಕ್ಕೆ ಕೋರಿಕೆ ಸಲ್ಲಿಸಬೇಕಿದೆ. ಈ ಸಂಬಂಧ ತಹಶೀಲ್ದಾರ್ ಹಂತದಲ್ಲಿ ಪರಿಶೀಲಿಸಿ ಜಿಲ್ಲಾಧಿಕಾರಿ ಗಳಿಗೆ ಪರಿಹಾರ ಮೊತ್ತ ಉಲ್ಲೇಖಿಸಿ ಪತ್ರ ರವಾನಿಸಬೇಕಿದೆ. ಆ ಮೇರೆಗೆ ಸಕಾಲದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಖಾಂತರ ಸ್ಪಷ್ಟ ಪರಿಹಾರ ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲು ನಿರ್ದೇಶಿಸಲಾಗಿದೆ.
ಪರಿಹಾರ ಮಾನದಂಡ: ನಿರ್ದಿಷ್ಟ ಕಾರಣಗಳೊಂದಿಗೆ ಸಾಲಬಾಧೆ ಇತ್ಯಾದಿ ಸಂದರ್ಭ ಆತ್ಮಹತ್ಯೆಗೆ ಒಳಗಾಗಿರುವ ರೈತ ಕುಟುಂಬಕ್ಕೆ ಅಧಿಕಾರಿಗಳು ಪರಿಶೀಲಿಸಿ, ಸೂಕ್ತವೆ ನಿಸಿದರೆ ರೂ. 5 ಲಕ್ಷ ಮೊತ್ತದ ಪರಿಹಾರ ಕಲ್ಪಿಸಲಾಗುತ್ತದೆ. ವಿಷ ಜಂತುಗಳು ಕಡಿದ ಸಂದರ್ಭ ಕೃಷಿಕ ಮೃತ್ಯು ವಿಗೀಡಾದರೆ ಗರಿಷ್ಠ ರೂ. 3 ಲಕ್ಷ ತನಕ ಪರಿಹಾರ ನೀಡಲು ಶಿಫಾರಸ್ಸು ಮಾಡಲಾಗಿದೆ.
(ಮೊದಲ ಪುಟದಿಂದ) ಒಣಹುಲ್ಲು ರಾಶಿ ಅಥವಾ ಸಾಗಾಟ ಸಂದರ್ಭ ಬೆಂಕಿಯಿಂದ ನಷ್ಟ ಸಂಭವಿಸಿದರೆ, ಅಧಿಕಾರಿಗಳು ಖುದ್ದು ಪರಿಶೀಲಿಸಿ ದಾಸ್ತಾನು ಅನುಸಾರ ನಷ್ಟ ಪರಿಹಾರಕ್ಕೆ ಶಿಫಾರಸ್ಸು ಮಾಡಲಿದ್ದು, ಈ ಬಾಬ್ತು ಗರಿಷ್ಠ ರೂ. 20 ಸಾವಿರ ಪರಿಹಾರ ನೀಡಲು ಅವಕಾಶವಿದೆ.
ಮೂರು ಆತ್ಮಹತ್ಯೆ: ಪ್ರಸಕ್ತ ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಕಂದಾಯ ಇಲಾಖೆಗೆ ಮೂರು ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಶಿಫಾರಸ್ಸು ಮಾಡಲಾಗಿದೆ. ಆ ಪ್ರಕಾರ ಕಣ್ಣಂಗಾಲ ಗ್ರಾಮದ ರೈತ ವಿ.ಜಿ. ರಮೇಶ್, ಸೀಗೆಹೊಸೂರುವಿನ ಕೆ.ಕೆ. ಯೋಗೇಂದ್ರ, ಕೊಡ್ಲಿಪೇಟೆ ಹೋಬಳಿ ಸಂಪಿಗೆದಾಳುವಿನ ಎಸ್.ಎಂ. ನಾಗೇಶ್ ಕುಟುಂಬಗಳಿಗೆ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಅಲ್ಲದೆ ರೈತರ ಆತ್ಮಹತ್ಯೆ ತಡೆಗಟ್ಟುವ ದಿಸೆಯಲ್ಲಿ ಹೆಚ್ಚಿನ ಕಾಳಜಿಗೆ ಮುಂದಾಗಿರುವ ಸರಕಾರ, ಕೃಷಿಕರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸುವದರೊಂದಿಗೆ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ತಲುಪಿಸುವತ್ತ ಮುತುವರ್ಜಿ ತೋರಬೇಕೆಂದು ಸಲಹೆ ಮಾಡಿದೆ.