ಗೋಣಿಕೊಪ್ಪ ವರದಿ, ಅ. 22: ರಾಜ್ಯ ಹಾಗೂ ಕೊಡಗು ಗುರುಕುಲ ಕಲಾ ಘಟಕ ವತಿಯಿಂದ ಕಾವೇರಿ ಚಂಗ್ರಾಂದಿ ಪ್ರಯುಕ್ತ ಆನ್‍ಲೈನ್ ಮೂಲಕ ಭಾನುವಾರ ಚಂಗ್ರಾಂದಿ ನೆನಪು ಆಚರಿಸಲಾಯಿತು. ಕಾವೇರಿ ಇತಿಹಾಸ, ಭಕ್ತಿಗೀತೆ, ಭಾಷಣ ಇಂತಹವುಗಳನ್ನು ಅನಾವರಣಗೊಳಿಸಲಾಯಿತು. ಸುಮಾರು 250 ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಂದಿನಿ ಗಣೇಶ್ ಸಂಗ್ರಹಿಸಿ ಬರೆದ ತಲಕಾವೇರಿ ಸ್ಥಳ ಮಹಾತ್ಮೆ ಲೇಖನವನ್ನು ಆನ್‍ಲೈನ್ ಮೂಲಕ ತಿಳಿಸಲಾಯಿತು. ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ದೀಪಿಕಾ ಮತ್ತು ಇಂಚರ ಅವರುಗಳಿಂದ ಭಕ್ತಿಗೀತೆ ಮೂಡಿಬಂತು. ಪೇಪರ್‍ನಲ್ಲಿ ತಯಾರಿಸಿದ ಶುಭಾಶಯಗಳ ಕಾರ್ಡ್‍ಗಳನ್ನು ಪ್ರದರ್ಶಿಸಲಾಯಿತು. ತಲಕಾವೇರಿಯ ತೀಥೋದ್ಭವದ ದೃಶ್ಯಗಳ ವೀಡಿಯೋ ಪ್ರದರ್ಶಿಸಲಾಯಿತು.

ಶೋಭ ರಕ್ಷಿತ್ ಸಂಗ್ರಹದ ಕಾವೇರಿ ಮಾತೆಯ ಸೋತ್ರ, ಘಟಕದ ಗೌರವಾಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಅವರು ತುಲಾಸಂಕ್ರಮಣದ ಆಚರಣೆಯ ವೀಡಿಯೋವನ್ನು ಕೊಡವ ಭಾಷೆಯಲ್ಲಿ ಪ್ರದರ್ಶಿಸಿದರು.

ಕಾವೇರಿ ಕಲಾಕುಂಚದಲ್ಲಿ ರೂಪುಗೊಂಡ ಮಾತೆ ಕಾವೇರಿಯ ಚಿತ್ರಪಟದ ಅನಾವರಣ ಮತ್ತು ಅವರು ತಲಕಾವೇರಿಯ ಕುರಿತು ಬರೆದ ವಿವರಣೆಯನ್ನು ನೀಡಲಾಯಿತು. ಭಾರತಿ ರಮೇಶ್ ಅವರಿಂದ ತಾಯಿ ಕಾವೇರಿಯನ್ನು ವಂದಿಸುವ ದೇವರನಾಮದ ಆಡಿಯೋ ನೀಡಲಾಯಿತು. ರಾಜ್ಯಾಧ್ಯಕ್ಷ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್ ಕೊಡಗಿನ ಬಗ್ಗೆ ಭಾಷಣ ಮಾಡಿದರು. ಕೊಡಗು ಗುರುಕುಲ ಕಲಾ ಘಟಕ ಜಿಲ್ಲಾಧ್ಯಕ್ಷೆ ಕೆಂಚೆಟ್ಟಿ ಶೋಭಾ ರಕ್ಷಿತ್ ಪ್ರಾರ್ಥಿಸಿದರು.