ಕೂಡಿಗೆ, ಅ. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವರ ಹೊಸೂರು, ಮದಲಾಪುರ ಹೆಗ್ಗಡಹಳ್ಳಿ, ಶಿರಹೋಳಲು ಗ್ರಾಮಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಾನೆಗಳಿಂದ ಭಾರೀ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಕಳೆದ ಎರಡು ತಿಂಗಳುಗಳಿಂದ ಬೆಂಡೆಬೆಟ್ಟದಲ್ಲಿ ಬೀಡುಬಿಟ್ಟಿರುವ 20ಕ್ಕೂ ಹೆಚ್ಚು ಕಾಡಾನೆಗಳು ಹಾರಂಗಿ ನದಿಯನ್ನು ದಾಟಿಕೊಂಡು ಬಂದು ಬೆಳೆಯನ್ನು ನಷ್ಟಪಡಿಸುತ್ತಿವೆ. ಆದ್ದರಿಂದ ಕಾಡಾನೆಗಳನ್ನು ಸರೆ ಹಿಡಿಯಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹುದುಗೂರು ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಮುಂಗಾರು ಬೆಳೆ ಮತ್ತು ಬೇಸಿಗೆ ಬೆಳೆಯನ್ನು ಸಂಪೂರ್ಣ ನಷ್ಟಪಡಿಸಿವೆ. ಹುದುಗೂರು ವ್ಯಾಪ್ತಿಯ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಅಳವಡಿಸಿದ ಸೋಲಾರ್ ಬೇಲಿಯನ್ನು ಆನೆಗಳು ತುಂಡು ಮಾಡಿದೆ. ಅರಣ್ಯ ಇಲಾಖೆಯವರು ಬೆಂಡೆಬೆಟ್ಟದ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.