ಕರಿಕೆ, ಅ. 21: ನೆರೆಯ ಕೇರಳ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಭಾಗಮಂಡಲ-ಕರಿಕೆ ಅಂತರ್ ರಾಜ್ಯ ಹೆದ್ದಾರಿ ದುರಸ್ತಿ ಮಾಡದೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ. ಮೊದಲೇ ಹಾನಿಗೊಂಡ ರಸ್ತೆ ಈ ಬಾರಿ ಸುರಿದ ಭಾರೀ ಮಳೆಗೆ ಮತ್ತಷ್ಟು ಹಾನಿಗೊಂಡು ಅಲ್ಲಲ್ಲಿ ಭೂಕುಸಿದು ಡಾಮರು ಸಂಪೂರ್ಣ ಕಿತ್ತು ಹೋಗಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿ ಮಾಡಲು ಕ್ರಮವಹಿಸಬೇಕಿದೆ.ಪ್ರತಿ ವರ್ಷ ತಲಕಾವೇರಿ ಜಾತ್ರೆ ಸಂದರ್ಭದಲ್ಲಿ ಕಾಡು ಕಡಿದು ರಸ್ತೆ ಗುಂಡಿ ಮುಚ್ಚುತಿದ್ದ ಇಲಾಖೆ ಈ ಬಾರಿ ಕೋವಿಡ್ ಪರಿಣಾಮ ಸರಳ ರೀತಿಯಲ್ಲಿ ತೀರ್ಥೋದ್ಭವ ಆಚರಣೆಗೆ ಸರಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ರಸ್ತೆ ಸರಿಪಡಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರ ಆಸೆಗೆ ತಣ್ಣೀರೆರಚಿದಂತಾಗಿದೆ. ಅಲ್ಲದೇ ಕ್ಷೇತ್ರದ ಶಾಸಕರ ವಿಶೇಷ ಆಸಕ್ತಿಯ ಪರಿಣಾಮವಾಗಿ ಸರಕಾರದ ಮಟ್ಟದಲ್ಲಿ ಒತ್ತಡ ಹಾಕಿ ಈ ರಸ್ತೆಯನ್ನು ಇದೀಗ ಮೇಲ್ದರ್ಜೆಗೆ ಏರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆಯೇ ಹದಿನೈದು ಕಿ.ಮಿ.ರಸ್ತೆ ಮರು ಡಾಮರೀಕರಣಕ್ಕೆ ಟೆಂಡರಾಗಿದ್ದು ಸಂಬಂಧಿಸಿದ ಇಲಾಖೆ ಈ ನಿಟ್ಟಿನಲ್ಲಿ ರಸ್ತೆಯನ್ನು ಸಮರ್ಪಕವಾಗಿ ಕೆಲಸ ನಿರ್ವಹಣೆ ಮಾಡಲು ಸಂಬಂಧಿಸಿದ ಗುತ್ತಿಗೆದಾರರಿಗೆ

(ಮೊದಲ ಪುಟದಿಂದ) ಸೂಚಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಅಲ್ಲದೆ ಕಳೆದ ಅನೇಕ ವರ್ಷಗಳಿಂದ ದುಸ್ಥಿತಿಯಲ್ಲಿರುವ ರಸ್ತೆ ಎಂಬ ಹಣೆಪಟ್ಟಿ ಇರುವ ಭಾಗಮಂಡಲ-ಕರಿಕೆ ರಸ್ತೆ ಎಂಬ ಕಳಂಕದಿಂದ ಮುಕ್ತವಾಗಲಿ ಎಂಬುದು ಎಲ್ಲರ ಆಶಯವಾಗಿದೆ.

-ಸುದೀರ್ ಹೊದ್ದೆಟ್ಟಿ