ಚೆಟ್ಟಳ್ಳಿ, ಅ. 21: ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮ ಸಂಘಟನೆ ವತಿಯಿಂದ ಸಿದ್ದಾಪುರ ಮುನವ್ವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ಪುಣ್ಯಸ್ಮರಣೆ ಹಾಗೂ ದುಅ ಮಜಲಿಸ್ ನಡೆಯಿತು.
ಕೊಡಗಿನ ಖಾಝಿಯಾಗಿದ್ದ ಮಹೂರ್ಂ ಪೂಕಳಂ ಅಬ್ದುಲ್ಲಾ ಉಸ್ತಾದ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಾಗೂ ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಬಾಬಜಾನ್ ಉಸ್ತಾದ್, ಉಸ್ಮಾನ್ ಹಾಜಿ, ಅಬ್ಬಾಸ್ ಹಾಜಿ ಅವರ ಅನುಸ್ಮರಣೆ ಸಂತಾಪ ಸಭೆ ನಡೆಯಿತು.
ಕೊಡಗು ಜಿಲ್ಲಾ ಉಪ ಖಾಝಿ ಎಂ.ಎಂ. ಅಬ್ದುಲ್ಲಾ ಫೈಝಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂತಾಪ ಸಭೆಯನ್ನು ಎಸ್‍ಕೆಜೆ ಎಂಸಿಸಿ ಕೇಂದ್ರ ಮಂಡಳಿ ವ್ಯವಸ್ಥಾಪಕ ಎಂ. ಅಬ್ದುಲ್ ರೆಹಮಾನ್ ಮುಸ್ಲಿಯಾರ್ ಉದ್ಘಾಟಿಸಿದರು.
ಧಾರ್ಮಿಕ ಪಂಡಿತ ಅಬ್ದುಲ್ ಸಮದ್ ಪೂಕೊಟ್ಟೂರು ಮುಖ್ಯ ಭಾಷಣದಲ್ಲಿ ಮಾತನಾಡಿ, ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ನಮ್ಮನ್ನಗಲಿದ ಹಿರಿಯರ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದರು.
ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಮುಸ್ತಫಾ ಹಾಜಿ, ಸಂಶುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಸಿಪಿಎಂ ಬಸೀರ್ ಹಾಜಿ, ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ಪ್ರಮುಖರಾದ ಉಮ್ಮರ್ ಪೈಝಿ, ಅಶ್ರಫ್ ಪೈಝಿ, ಇಸ್ಮಾಯಿಲ್ ಮುಸ್ಲಿಯಾರ್, ಉಸ್ಮಾನ್ ಪೈಝಿ, ಕೆ.ಎಂ. ಬಶೀರ್, ಖತೀಬ್ ನೌಫಲ್ ಉದವಿ ಸೇರಿದಂತೆ ಮತ್ತಿತರರು ಇದ್ದರು.