ಶನಿವಾರಸಂತೆ, ಅ. 21: ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮುಳ್ಳೂರು ಗ್ರಾಮದ ಜೈನ ಬಸದಿಗೆ ಹೋಗುವ ಒಂದೂವರೆ ಕಿಲೋಮೀಟರ್ ರಸ್ತೆಯನ್ನು ದುರಸ್ತಿಪಡಿಸಿಕೊಡುವಂತೆ ಈ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಗ್ರಾಮದಲ್ಲಿರುವ ಪುರಾತನ ಕಾಲದ ತ್ರಿವಳಿ ಬಸದಿ ಪ್ರವಾಸಿಗರ ತಾಣವಾಗಿದೆ. ಆದರೆ, ಗ್ರಾಮದ ಜಂಕ್ಷನ್‍ನಿಂದ ಬಸದಿಗೆ ಹೋಗುವ ರಸ್ತೆ ಡಾಂಬರು ಕಿತ್ತುಹೋಗಿ, ಅಲ್ಲಲ್ಲಿ ಗುಂಡಿಬಿದ್ದು ಹದಗೆಟ್ಟಿದೆ. ವಾಹನ ಸಂಚಾರವಿರಲೀ ಪಾದಚಾರಿಗಳು ನಡೆದಾಡಲು ತ್ರಾಸದಾಯಕವಾಗಿದೆ. ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯವಸ್ತು ಇಲಾಖೆ, ಲೋಕೋಪಯೋಗಿ ಇಲಾಖೆ, ಶಾಸಕರ ನಿಧಿ ಯಾವುದರಿಂದಲೂ ರಸ್ತೆ ದುರಸ್ತಿಯಾಗಿಲ್ಲ. ಆದ್ದರಿಂದ ರಸ್ತೆ ಶೀಘ್ರದಲ್ಲೇ ದುರಸ್ತಿಗೊಳಿಸುವಂತೆ ಸರೋಜಮ್ಮ ಆಗ್ರಹಿಸಿದ್ದಾರೆ.