ಮಡಿಕೇರಿ, ಅ. 21: ಮದೆ ಗ್ರಾಮ ಪಂಚಾಯಿತಿಗೆ ಒಳಪಡುವ ದೇವರಕೊಲ್ಲಿ ಪ್ರದೇಶದಲ್ಲಿ 15 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರ ಬಾಳೆ, ತೆಂಗು, ಅಡಿಕೆ, ಕೊಕ್ಕೊ, ಕೃಷಿ ಫಸಲನ್ನು ನಾಶಪಡಿಸುತ್ತಿವೆ. ಕೂಡಲೇ ಕಾಡಾನೆ ಹಾವಳಿಯನ್ನು ತಡೆಗಟ್ಟುವಂತೆ ಗ್ರಾಮಸ್ಥರು ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕಾಡಾನೆಗಳ ಹಿಂಡಿನಲ್ಲಿ ಕಲ್ಲಾನೆಯೂ ಇದ್ದು, ಕಳೆದ ತಾ. 15ರಂದು ಸಂಜೆ ವೇಳೆಯಲ್ಲಿ ರಸ್ತೆಗೆ ಬಂದಿದ್ದು, ಇದನ್ನು ಓಡಿಸಲು ಪ್ರಯತ್ನಿಸಿದ ಯುವಕರನ್ನು ಬೆನ್ನಟ್ಟಿದೆ. ರಸ್ತೆಯಲ್ಲಿ ಕಾಡಾನೆಯನ್ನು ಕಂಡ ಕಾರು ಚಾಲಕರು ಗಾಬರಿಗೊಳಗಾಗಿ ಅಪಘಾತ ಕೂಡ ಸಂಭವಿಸಿದೆ. ಸಂಜೆ ಬಳಿಕ ಗ್ರಾಮದಲ್ಲಿ ಭಯದ ವಾತಾವರಣವಿದ್ದು, ಕಾಡಾನೆ ದಾಳಿಯಿಂದ ರಕ್ಷಣೆ ಒದಗಿಸಿಕೊಡಬೇಕಾಗಿ ಮನವಿಯಲ್ಲಿ ಕೋರಲಾಗಿದೆ. ಗ್ರಾ.ಪಂ. ಮಾಜಿ ಸದಸ್ಯ ಶಿವಪೆರುಮಾಳ್, ಮುಸ್ತಫಾ ನೇತೃತ್ವದಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.