ಮಡಿಕೇರಿ, ಅ. 21: ಕಾಫಿ ಬೆಳೆಗಾರರಿಗೆ ಆಯಾ ಕಾಲಕ್ಕೆ ತಕ್ಕಂತೆ ತೋಟ ನಿರ್ವಹಣೆ, ಕಾಫಿ ಬೆಲೆ, ಮತ್ತಿತರ ಅಗತ್ಯೆಗಳ ಕುರಿತಾಗಿ ಸೂಕ್ತ ರೀತಿಯ ಸಲಹೆ - ಸಂದೇಶಗಳನ್ನು ನೀಡುವ ಚಿಂತನೆಯೊಂದಿಗೆ ಕಾಫಿ ಮಂಡಳಿ ಹೊಸದಾಗಿ ಪ್ರಾರಂಭಿಸಿರುವ ಅಂತರ್‍ಜಾಲದ ಮೂಲಕ (ಮೊಬೈಲ್) ಸೇವೆ ‘ಕಾಫಿ ಕೃಷಿ ತರಂಗ’ ಬೆಳೆಗಾರರಿಗೆ ಉಪಯುಕ್ತವಾಗುತ್ತಿದೆ.ಕಾಫಿ ಮಂಡಳಿ ವರ್ಷದ ಹಿಂದೆಯೇ ಈ ಕಾಫಿ ಕೃಷಿ ತರಂಗ ಎಂಬ ಸೇವೆÀಯನ್ನು ಪ್ರಾರಂಭಿಸಿದ್ದು, ಆರಂಭದಲ್ಲಿ ಇದು ಚಿಕ್ಕಮಂಗಳೂರು, ಹಾಸನ ಜಿಲ್ಲೆಗಳಲ್ಲಿ ಯಶಸ್ಸು ಕಂಡಿದೆ. ಈ ಸೇವೆ ಇದೀಗ ಕೊಡಗು ಜಿಲ್ಲೆಯಲ್ಲಿಯೂ ಆಸಕ್ತಿದಾಯಕವಾಗಿ ಪರಿಣಮಿಸುತ್ತಿದ್ದು, ಕಳೆದ ಹಲವು ತಿಂಗಳಿನಿಂದ ಹಲವಷ್ಟು ಬೆಳೆಗಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.ಪ್ರಸ್ತುತ ಕೋವಿಡ್ ಸಂಕಷ್ಟ, ಸಿಬ್ಬಂದಿ ಕೊರತೆ ಮತ್ತಿತರ ಕಾರಣಗಳಿಂದ ಬೆಳೆಗಾರರನ್ನು ಮಂಡಳಿಯ ಮೂಲಕ ಅಧಿಕಾರಿಗಳು ನೇರವಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮೊಬೈಲ್‍ನ ಮೂಲಕ ಒದಗಿಸಲಾಗುವ ಈ ಸೇವೆಯನ್ನು ಹಲವರು ಪಡೆದುಕೊಳ್ಳಬಹುದಾಗಿದೆ.
ಕಾಫಿ ಮಂಡಳಿಯ ಬೆಂಗಳೂರು ಮುಖ್ಯ ಕಚೇರಿಯಲ್ಲಿ ಇದಕ್ಕಾಗಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಕಾಲ್‍ಸೆಂಟರ್ ಒಂದನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಬೆಳೆಗಾರರಿಗೆ ಅಗತ್ಯ ಮಾಹಿತಿ ಸಲಹೆ ನೀಡುವ ನಿಟ್ಟಿನಲ್ಲಿ ನಿರ್ದಿಷ್ಟ ದೂರವಾಣಿ ಸಂಪರ್ಕವೊಂದಿದೆ. ಈ ಸಂಖ್ಯೆಗೆ ಆಸಕ್ತ ಬೆಳೆಗಾರರು ತಮ್ಮ ಮೊಬೈಲ್‍ನ ಮೂಲಕ ಮಿಸ್ಡ್‍ಕಾಲ್ ನೀಡಿದಲ್ಲಿ ಆ ಸಂಖ್ಯೆ ನೋಂದಾಯಿಸ ಲ್ಪಡುತ್ತದೆ. ಬಳಿಕ ನೋಂದಾಯಿತವಾದ ಈ ಸಂಖ್ಯೆಗೆ ಮಂಡಳಿಯ ಪರಿಣಿತರು ಒಂದೆರಡು ದಿನಗಳಲ್ಲಿ ಕರೆ ಮಾಡಿ ಆಯಾ ಬೆಳೆಗಾರರ ಪೂರ್ಣ ವಿವರವನ್ನು ಪಡೆದುಕೊಳ್ಳುತ್ತಾರೆ. ತಮ್ಮ ತೋಟ ಇರುವ ಸ್ಥಳ, ಮಳೆಯ ಪ್ರಮಾಣ ಸೇರಿದಂತೆ ಅಗತ್ಯ ವಿವರಗಳನ್ನು ನೀಡಿ ಬೆಳೆಗಾರರು
(ಮೊದಲ ಪುಟದಿಂದ) ವಾತಾವರಣಕ್ಕೆ ತಕ್ಕಂತೆ ಯಾವ ರೀತಿಯಲ್ಲಿ ಕಾಫಿಯನ್ನು ಬೆಳೆಯಬಹುದು, ಆಯಾ ಕಾಲಕ್ಕೆ ಸಂಬಂಧಿಸಿದಂತೆ ತೋಟ ನಿರ್ವಹಣೆ, ಗೊಬ್ಬರ ಒದಗಿಸುವಿಕೆಯಂತಹ ವಿಚಾರಗಳನ್ನು ಈ ಕಾಲ್‍ಸೆಂಟರ್‍ನ ಮೂಲಕ ಪಡೆದುಕೊಳ್ಳಬಹುದು.
ನೋಂದಾಯಿತವಾಗಿರುವ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದಲ್ಲಿ ಅದು ಅಲ್ಲಿ ರೆಕಾರ್ಡ್ ಆಗುತ್ತದೆ. ಇದರಲ್ಲಿ ಬೆಳೆಗಾರರು ತಮ್ಮ ಪ್ರಶ್ನೆ - ಸಂಶಯಗಳನ್ನು ಹೇಳಿಕೊಳ್ಳಬಹುದು. ಇದಕ್ಕೆ ನಂತರದಲ್ಲಿ ಕಾಫಿ ಮಂಡಳಿಯ ತಜ್ಞರು ಸೂಕ್ತ ಮಾಹಿತಿ, ಸಲಹೆಗಳನ್ನು ನೀಡುತ್ತಾರೆ. ಈ ಸೇವೆಯನ್ನು ಪಡೆದುಕೊಳ್ಳಲು ಬೆಳೆಗಾರರಿಗೆ ಯಾವದೇ ಶುಲ್ಕ ಇರುವದಿಲ್ಲ. ಕೇವಲ ‘ಮಿಸ್ಡ್ ಕಾಲ್’ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಸುಮಾರು ಅಂದಾಜು 25 ಸಾವಿರದಷ್ಟು ಮಂದಿ ಕಾಫಿ ಕೃಷಿ ತರಂಗ ಸೌಲಭ್ಯಕ್ಕೆ ನೋಂದಾಯಿಸಿಕೊಂಡಿದ್ದಾರೆ ಎಂಬದಾಗಿ ಕಾಫಿ ಮಂಡಳಿಯ ಮಡಿಕೇರಿಯ ಉಪ ನಿರ್ದೇಶಕ ಲಕ್ಷ್ಮಿ ನಾರಾಯಣ್ ‘ಶಕ್ತಿ’ಗೆ ಮಾಹಿತಿ ನೀಡಿದರು. ತೋಟಗಳ ನಿರ್ವಹಣೆ, ಮಾರುಕಟ್ಟೆ ಮಾಹಿತಿ, ಸಂಶಯಗಳಿದ್ದಲ್ಲಿ ಅದರ ನಿವಾರಣೆ, ಕಾಲಕಾಲಕ್ಕೆ ಬೇಕಾದ ಮಾಹಿತಿ ಇತ್ಯಾದಿ ಪ್ರಯೋಜನ ಈ ಕಾಫಿ ಕೃಷಿತರಂಗದ ಮೂಲಕ ಸಿಗಲಿದ್ದು, ಬೆಳೆಗಾರರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಕಾಫಿ ಮಂಡಳಿಯಲ್ಲಿ ಬೆಳೆಗಾರರಿಗೆ ಹಲವಷ್ಟು ಪ್ರಯೋಜನಕಾರಿಯಾಗುವಂತಹ ಯೋಜನೆಗಳಿವೆ. ಉದಾಹರಣೆಗೆ ಮಣ್ಣು ಪರೀಕ್ಷೆ, ಗೊಬ್ಬರದ ವಿಚಾರ, ಪ್ರಯೋಗಾಲಯದ ಸೂಕ್ತ ಮಾಹಿತಿ ಮತ್ತಿತರ ವಿಚಾರಗಳಿವೆ. ಆದರೆ ಬಹಳಷ್ಟು ಬೆಳೆಗಾರರು ಇದರ ಪ್ರಯೋಜನ ಪಡೆಯಲು ಮುಂದಾಗುತ್ತಿಲ್ಲ. ಇದನ್ನು ಸೂಕ್ತವಾಗಿ ಬಳಸಿಕೊಂಡಲ್ಲಿ ಉಪಯೋಗವಿರುವದಾಗಿ ಕಾಫಿ ಮಂಡಳಿಯ ನಿವೃತ್ತ ಲೈಸನ್ ಆಫೀಸರ್ ಬೊಪ್ಪಂಡ ಶ್ಯಾಮ್ ಪೂಣಚ್ಚ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.