ಶನಿವಾರಸಂತೆ, ಅ. 21: ಭಾರದ ವಸ್ತುಗಳನ್ನು ತುಂಬಿಸಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಚಾರವನ್ನು ನಿಷೇಧ ಮಾಡಿದ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಟಿಪ್ಪರ್ (ಕೆ.ಎ. 28. ಸಿ. 5954) ಚಾಲಕನಿಗೆ ಮಡಿಕೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ರೂ. 20,000 ದಂಡ ವಿಧಿಸಿದ್ದಾರೆ.

ತಾ. 17 ರಂದು ಬೆಳಿಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ಹಾಗೂ ಸಿಬ್ಬಂದಿಗಳು ಕೊಡ್ಲಿಪೇಟೆ ವ್ಯಾಪ್ತಿಯ ನಿಲುವಾಗಿಲು ಗ್ರಾಮದಲ್ಲಿ ಕರ್ತವ್ಯದಲ್ಲಿರುವಾಗ ಮಲ್ಲಿಪಟ್ಟಣದ ಕಡೆಯಿಂದ ಟಿಪ್ಪರ್‍ನಲ್ಲಿ ಅಕ್ರಮವಾಗಿ ಅಧಿಕ ಭಾರದ ಎಂ. ಸ್ಯಾಂಡನ್ನು ಸಾಗಾಟ ಮಾಡುತ್ತಿದ್ದ ಟಿಪ್ಪರ್ ತಡೆದು ರಹದಾರಿಯನ್ನು ಪರಿಶೀಲಿಸಿದಾಗ 15 ಮೆಟ್ರಿಕ್ ಟನ್‍ಗೆ ರಹದಾರಿ ನೀಡಿದ್ದರು. ಅಧಿಕ ಭಾರ ಇರುವುದು ಕಂಡು ಬಂದಿದೆ. ಟಿಪ್ಪರನ್ನು ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್‍ನ ಆರ್‍ಟಿಆರ್ ವೇ ಬ್ರಿಡ್ಜ್‍ನಲ್ಲಿ ತೂಕ ಮಾಡಿಸಿದಾಗ ಒಟ್ಟು ತೂಕ 38,990 ಕೆ.ಜಿ. ಇರುವುದು ಕಂಡು ಬಂದಿದೆ. 23,990 ಕೆ.ಜಿ. ಅಧಿಕ ತೂಕದಲ್ಲಿ ಸಾಗಾಟ ಮಾಡಿ ರಹದಾರಿ ನಿಯಮವನ್ನು ಉಲ್ಲಂಘನೆ ಮಾಡಿರುವದು ಕಂಡು ಬಂದು, ಟಿಪ್ಪರ್ ಹಾಗೂ ಮರಳನ್ನು ವಶಪಡಿಸಿಕೊಂಡು ಮಡಿಕೇರಿಯ ಗಣಿ ಮತ್ತು ಭೂ ವಿಜ್ಞಾನ ಕಚೇರಿಗೆ ವರದಿ ಸಲ್ಲಿಸಲಾಗಿ, ರಹದಾರಿ ನಿಯಮ ಉಲ್ಲಂಘನೆ ಮಾಡಿರುವ ಟಿಪ್ಪರ್ ಚಾಲಕ ಮಲ್ಲಿಪಟ್ಟಣದ ನಿವಾಸಿ ರೇವಣ್ಣನಿಗೆ ರೂ. 20,000 ದಂಡ ವಿಧಿಸಲಾಗಿದೆ. ಚಾಲಕ ದಂಡ ಪಾವತಿಸಿ ಕೊಡ್ಲಿಪೇಟೆಯ ಉಪಪೊಲೀಸ್ ಠಾಣೆಯ ಸರಹದ್ದಿನಲ್ಲಿ ನಿಲ್ಲಿಸಲಾದ ಟಿಪ್ಪರನ್ನು ಬಿಡಿಸಿಕೊಂಡಿದ್ದಾನೆ. ಕಾರ್ಯಾಚರಣೆಯಲ್ಲಿ ಸಹಾಯಕ ಠಾಣಾಧಿಕಾರಿ ಹೆಚ್.ಎ. ಗೋವಿಂದ್, ಸಿಬ್ಬಂದಿಗಳಾದ ಹರೀಶ್, ವಿವೇಕ್ ಪಾಲ್ಗೊಂಡಿದ್ದರು.