ಕಣಿವೆ, ಅ. 21 : ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೋವಿಡ್ ನಿಯಮಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಆತಂಕವಿಲ್ಲದೆ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಏಕೆಂದರೆ ಶಾಸಕರ ಆಪ್ತ ಸಹಾಯಕರು ಹಾಗೂ ವಾಹನ ಚಾಲಕರಿಗೂ ಅನಾರೋಗ್ಯದ ಕಾರಣ ಶಾಸಕರೇ ಖುದ್ದು ವಾಹನ ಚಾಲಿಸಿಕೊಂಡು ಕುಶಾಲನಗರದ ಕಾರ್ಯಕ್ರಮಕ್ಕೆ ಬುಧವಾರ ಆಗಮಿಸಿದ್ದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಂಜನ್, ತಾನು ಕೋವಿಡ್ ನಿಯಮಾವಳಿಗಳನ್ನು ಚಾಚುತಪ್ಪದೇ ಪಾಲಿಸುತ್ತಿದ್ದೇನೆ. ಮಾಸ್ಕ್ ಕಡ್ಡಾಯವಾಗಿ ಧರಿಸುತ್ತಿದ್ದೇನೆ. ಸಾಮಾಜಿಕ ಅಂತರ ಕಾಪಾಡುತ್ತಿದ್ದೇನೆ. ಕಾರ್ಯಕ್ರಮಗಳಿಗೆ ತೆರಳಿದಾಗಲೂ ಕೂಡ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಎಚ್ಚರ ಮೂಡಿಸುತ್ತಿದ್ದೇನೆ. ಮಾಸ್ಕ್ ಹಾಕದಿದ್ದವರನ್ನು ಕಾರ್ಯಕ್ರಮದಿಂದ ಹೊರ ಕಳುಹಿಸುತ್ತೇನೆ ಎಂದು ಶಾಸಕರು ಹೇಳಿದರು.

ಸಾರ್ವಜನಿಕರು ಕೋವಿಡ್ ನಿಯಮಾವಳಿಗಳನ್ನು ತಪ್ಪದೇ ಅನುಸರಿಸುವ ಮೂಲಕ ಪ್ರಧಾನಿ ಮೋದಿ ಅವರ ನಿರ್ದೇಶನವನ್ನು ಪಾಲಿಸಿ ಕೋವಿಡ್ ವಿರುದ್ಧ ಹೋರಾಟ ನಡೆಸಿ ಕೋವಿಡ್ ಹಿಮ್ಮೆಟ್ಟಲು ಶ್ರಮಿಸಬೇಕೆಂದು ಕರೆಕೊಟ್ಟರು.