ಕೂಡಿಗೆ, ಅ. 19: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ, ಹುದುಗೂರು, ಕಾಳಿದೇವನಹೂಸೂರು, ಸೀತೆಗದ್ದೆ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳು ನಾಟಿ ಗದ್ದೆಗಳಿಗೆ ದಾಳಿ ನಡೆಸಿವೆ. ಈಗಾಗಲೇ ನಾಟಿ ಮಾಡಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಅಳಿದುಳಿದ ಭತ್ತದ ಬೆಳೆ ಕಾಳುಕಟ್ಟಲು ಸಿದ್ಧವಾಗುತ್ತಿದೆ. ಅಂತಹ ಬೆಳೆಯನ್ನು ಬೆಂಡೆಬೆಟ್ಟ ಮೂಲಕ ಬಂದಿರುವ ಕಾಡಾನೆಗಳು ಹಾರಂಗಿ ನದಿ ಅಂಚಿನ ರೈತರುಗಳಾದ ಪ್ರಕಾಶ, ಕಾಳೇಗೌಡ, ಕೃಷ್ಣ, ಸುರೇಶ, ಸುಶೀಲಮ್ಮ, ನಂಜುಂಡ, ಮಹೇಶ್, ಕಿರಣ ಸೇರಿದಂತೆ ಅನೇಕ ರೈತರ ಜಮೀನಿಗೆ ದಾಳಿ ಮಾಡಿ ಹಾಳುಮಾಡಿವೆ.
ಯಾವ ಅಧಿಕಾರಿಗಳಿಗೆ ಹೇಳಿದರೂ, ಖುದ್ದಾಗಿ ಅರಣ್ಯ ಇಲಾಖೆಯ ಕಚೇರಿಯಲ್ಲಿ ಮನವಿಯನ್ನು ಸಲ್ಲಿಸಿದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.