ಸೋಮವಾರಪೇಟೆ,ಅ.20: ಕಳೆದ 3 ವರ್ಷಗಳ ಹಿಂದೆ ನಿರ್ಮಾಣವಾಗಿರುವ ತಾಲೂಕಿನ ಮಾದಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಇದೀಗ ವೈದ್ಯರು ಮತ್ತು ಶುಶ್ರೂಷಕಿಯರಿಗೆ ನರಕದ ಕೂಪವಾಗಿ ಪರಿಣಮಿಸಿದೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಪದ್ಧತಿ-ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯಡಿ ಕಳೆದ 2017ರಲ್ಲಿ ನಿರ್ಮಾಣಗೊಂಡ ಕಟ್ಟಡ ಸಣ್ಣ ಮಳೆಗೆ ಸೋರಿಕೆಯಾಗುತ್ತಿದ್ದು, ಕಾಮಗಾರಿ ಕಳಪೆಯಾಗಿರುವ ಸಂಶಯ ಮೂಡುತ್ತಿದೆ. ಮಾದಾಪುರ ದಲ್ಲಿದ್ದ ಹಳೆಯ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಸರ್ಕಾರದ ವತಿಯಿಂದ ನೂತನವಾಗಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಇದು ನಿರ್ಮಾಣವಾಗಿ 3 ವರ್ಷವಷ್ಟೇ ಕಳೆದಿದ್ದು, ಈಗಾಗಲೇ ಛಾವಣಿ ಸೋರುತ್ತಿದೆ.

ಆಸ್ಪತ್ರೆಯೊಳಗೆ ಮಳೆ ಕೊಯ್ಲು ಆರ್‍ಸಿಸಿ ಛಾವಣಿಯಾಗಿದ್ದರೂ ಸಣ್ಣ ಮಳೆಗೆ ನೀರು ಒಳಬರುತ್ತಿದ್ದು, ಈ ನೀರನ್ನು ಸಂಗ್ರಹಿಸಲು ಕಟ್ಟಡದ ಒಳಭಾಗ ಬಕೆಟ್‍ಗಳನ್ನು ಇಡಲಾಗಿದೆ. ಒಂದು ರೀತಿಯಲ್ಲಿ ಆಸ್ಪತ್ರೆಯೊಳಗಡೆ ಮಳೆಕೊಯ್ಲು ವ್ಯವಸ್ಥೆ ಇಲ್ಲದೆ! ಇದರೊಂದಿಗೆ ಈ ಆಸ್ಪತ್ರೆಗೆ ಕನಿಷ್ಟ ಜನರೇಟರ್, ಸೋಲಾರ್ ಬೆಳಕಿನ ವ್ಯವಸ್ಥೆಯೂ ಇಲ್ಲವಾಗಿದೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 3 ವರ್ಷದ ಹಿಂದಷ್ಟೇ ನಿರ್ಮಾಣವಾದ ಆಸ್ಪತ್ರೆ ಸೋರಿಕೆ ಯಾಗುತ್ತಿರುವದು ಆಶ್ಚರ್ಯಕ್ಕೆ ಕಾರಣವಾಗಿದೆ. ಸರ್ಕಾರಿ ಕಟ್ಟಡಗಳನ್ನು ಗುಣಮಟ್ಟ ರಹಿತವಾಗಿ ಬೇಕಾಬಿಟ್ಟಿ ನಿರ್ವಹಿಸಿರುವದು ಇದರಿಂದ ಖಾತ್ರಿಯಾಗಿದೆ. ನೂತನ ಕಟ್ಟಡದ ಹೆಸರಿನಲ್ಲಿ ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ಸ್ಥಳೀಯರಾದ ಜಾನ್ಸನ್ ಆರೋಪಿಸಿದ್ದಾರೆ.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದರೂ ಕನಿಷ್ಟ ಜನರೇಟರ್, ಸೋಲಾರ್ ವ್ಯವಸ್ಥೆಯೂ ಇಲ್ಲವಾಗಿದೆ. ವಿದ್ಯುತ್ ಸ್ಥಗಿತಗೊಂಡರೆ ಕತ್ತಲೆಯಲ್ಲಿಯೇ ಕೆಲಸ ನಿರ್ವಹಿಸಬೇಕಿದೆ ಎಂದು ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.

ಮೊಬೈಲ್ ಲೈಟ್‍ನಲ್ಲಿ ಹೆರಿಗೆ..!

ಈ ಮಳೆಗಾಲದಲ್ಲಿ ವಿದ್ಯುತ್ ಸ್ಥಗಿತಗೊಂಡ ಸಂದರ್ಭ ಮೊಬೈಲ್ ಟಾರ್ಚ್ ಮತ್ತು ಚಾರ್ಜರ್ ಲೈಟ್ ಮೂಲಕ ಗರ್ಭಿಣಿ ಮಹಿಳೆ ಯೋರ್ವರಿಗೆ ಹೆರಿಗೆ ಮಾಡಿಸಲಾಗಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಈ ಆಸ್ಪತ್ರೆಯಲ್ಲಿ ವೈದ್ಯರು-ಸಿಬ್ಬಂದಿಗಳು ಕೆಲಸ ನಿರ್ವಹಿಸಬೇಕಿದೆ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗಕ್ಕಿರುವ ಅನಾದರ ಇದರಿಂದ ವೇದ್ಯ ವಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಸತಿ ಇಲ್ಲ

ಇನ್ನು ಮಾದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ವಸತಿ ಗೃಹದ ಸೌಲಭ್ಯವೂ ಇಲ್ಲವಾಗಿದೆ. ಈಗಿರುವ ವಸತಿ ಗೃಹದ ಸುತ್ತಲೂ ಕಾಡು ಬೆಳೆದು ವಾಸಕ್ಕೆ ಅಯೋಗ್ಯವಾಗಿದೆ. ನಿರ್ವಹಣೆಯ ಕೊರತೆಯಿಂದ ವಸತಿ ಗೃಹದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಈಗಲೋ ಆಗಲೋ ಎಂಬಂತಿರುವ ಕಟ್ಟಡದಲ್ಲಿ ಉಳಿದುಕೊಳ್ಳಲು ವೈದ್ಯರು-ಸಿಬ್ಬಂದಿಗಳು ಹಿಂದೇಟು ಹಾಕುತ್ತಿದ್ದಾರೆ.

ಇನ್ನು ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕರಿಗೆ ಹಳೆಯ ಆಸ್ಪತ್ರೆ ಕಟ್ಟಡದಲ್ಲಿ ಒಂದು ಕೊಠಡಿ ನೀಡಲಾಗಿದೆ. ಈ ಕಟ್ಟಡದಲ್ಲಿ ಸ್ನಾನ ಗೃಹ ಇಲ್ಲದ್ದರಿಂದ ಶೌಚಾಲಯದಲ್ಲೇ ಸ್ನಾನ ಮಾಡುವಂತಾಗಿದೆ. ರಾತ್ರಿ ಪಾಳಿಯ ಸಿಬ್ಬಂದಿಗಳಿಗೂ ಸಹ ವಸತಿ ಗೃಹ ಇಲ್ಲದೇ ಇರುವದರಿಂದ ಆಸ್ಪತ್ರೆ ಕೊಠಡಿಯಲ್ಲೇ ಉಳಿಯಬೇಕಿದೆ.

ಮುಕ್ತಿ ಕೊಡಿಸಿ

ಒಟ್ಟಾರೆ ಮಾದಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯರು-ಸಿಬ್ಬಂದಿಗಳು ಮಾತ್ರವಲ್ಲ; ರೋಗಿಗಳಿಗೂ ನರಕದ ಕೂಪವಾಗಿ ಪರಿಣಮಿಸಿದೆ. ಈ ಆಸ್ಪತ್ರೆಯನ್ನು ಕಳೆದ 18.03.2017ರಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಿದ್ದು, ಆ ನಂತರ ಇತ್ತ ಗಮನ ಹರಿಸದ

(ಮೊದಲ ಪುಟದಿಂದ) ಹಿನ್ನೆಲೆ ಅವ್ಯವಸ್ಥೆಯ ಆಗರವಾಗಿ ಸರ್ಕಾರಿ ಆಸ್ಪತ್ರೆ ಮಾರ್ಪಟ್ಟಿದೆ.

ತವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಅಸ್ಪತ್ರೆಯ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಅವರು ಗಮನ ಹರಿಸಿ, ಅವ್ಯವಸ್ಥೆಗಳಿಂದ ಮುಕ್ತಿ ದೊರಕಿಸಿಕೊಡಬೇಕೆಂದು ಸ್ಥಳೀಯರು ‘ಶಕ್ತಿ’ ಮೂಲಕ ಗಮನ ಸೆಳೆದಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರು ಪ್ರಥಮವಾಗಿ ಆಸ್ಪತ್ರೆಗೆ ತೆರಳುತ್ತಾರೆ. ಕೊರೊನಾ ವಾರಿಯರ್ಸ್‍ಗಳೆಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಹೊಗಳುವ ಜನಪ್ರತಿನಿಧಿಗಳು, ಅವರುಗಳಿಗೆ ಕನಿಷ್ಟ ಸೌಕರ್ಯವನ್ನು ಒದಗಿಸಲು ಮನಸು ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

- ವಿಜಯ್ ಹಾನಗಲ್