ಸೋಮವಾರಪೇಟೆ,ಅ.19: ಜೀವನದಲ್ಲಿ ಜಿಗುಪ್ಸೆ ಹೊಂದಿದ ಯುವಕನೋರ್ವ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಟ್ಟಿಹೊಳೆ ವ್ಯಾಪ್ತಿಯ ಹಾಡಗೇರಿಯಲ್ಲಿ ನಡೆದಿದೆ.ಹಾಡಗೇರಿ ಪೈಸಾರಿ ನಿವಾಸಿ ಭಾಸ್ಕರ್ ಎಂಬವರ ಪುತ್ರ ಮಂಜು (29) ಎಂಬಾತನೇ ಆತ್ಮಹತ್ಯೆಗೆ ಶರಣಾ ದವನು. ಅವಿವಾಹಿತನಾಗಿದ್ದ ಮಂಜು, ಮಾದಾಪುರದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಸ್ನೇಹಿತರೊಂದಿಗೆ ಕೈಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.ಇದರೊಂದಿಗೆ ಹೆಚ್ಚಿನ ಮದ್ಯಪಾನ ಮಾಡುತ್ತಿದ್ದ ಮಂಜು, ಕಳೆದ ತಾ. 17ರಿಂದ ಮನೆಗೆ ಬಂದಿರಲಿಲ್ಲ. ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ(ಮೊದಲ ಪುಟದಿಂದ) ಇಂದು ಆತನ ತಂದೆ ಭಾಸ್ಕರ್ ಅವರು ಚೆಟ್ಟಿಯಾರ್ ಎಸ್ಟೇಟ್‍ನ ಬಳಿ ತೆರಳಿದಾಗ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಂಜುವಿನ ಮೃತದೇಹ ಪತ್ತೆಯಾಗಿದೆ.ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ವಿರೂಪಾಕ್ಷ, ಮಾದಾಪುರ ಉಪ ಠಾಣೆಯ ಎ.ಎಸ್.ಐ. ಪೊನ್ನಪ್ಪ, ಸಿಬ್ಬಂದಿ ಸುರೇಶ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೋಮವಾರಪೇಟೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.