ವಿಶ್ವವಿಖ್ಯಾತ ದಸರಾ ಎಂದರೆ ಎಲ್ಲೆಲ್ಲೂ ಬಣ್ಣ ಬಣ್ಣದ ಬೆಳಕಿನ ಚಿತ್ತಾರ, ತಳಿರು-ತೋರಣ, ಅಲಂಕಾರ, ಸಡಗರ ಸಂಭ್ರಮದ ಹಬ್ಬದ ಮಹೋತ್ಸವವು ತನ್ನದೇ ಆದ ಇತಿಹಾಸ ವೈಭವವನ್ನು ಹೊಂದಿದೆ. ಇಡೀ ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ಕರ್ನಾಟಕದ ಹಿರಿಮೆಯ ಉತ್ತುಂಗ ಶಿಖರದ ಗರಿ ದಸರಾ ಶುರುವಾಗಿದ್ದೇ ಒಂದು ಮನಮೋಹಕ. ಆದರೆ ದಸರಾ ಹಿಂದಿರುವ ಇತಿಹಾಸದ ಪಯಣವೇ ವಿಶಿಷ್ಟ ಮತ್ತು ವೈಭವಪೂರಿತ.

ಈ ನವರಾತ್ರಿಯನ್ನು ಧಾರ್ಮಿಕ ಹಾಗೂ ಸಾಂಸ್ಕøತಿಕವಾಗಿ ಆಚರಿಸಿದ್ದು ಮತ್ತು ಧಾರ್ಮಿಕ ಆಚರಣೆಯು ನವರಾತ್ರಿಗೆ ಒಂದು ಹೊಸ ಆಯಾಮ ಮತ್ತು ಮೆರುಗು ತಂದುಕೊಟ್ಟವರು ವಿಜಯನಗರದ ಅರಸರು. ವಿಜಯನಗರ ಸಾಮ್ರಾಜ್ಯದ ತುಳುವ ವಂಶದ ದೊರೆ ಯುವನ ರಾಜ್ಯ ಪ್ರತಿಷ್ಠಾಪನಾಚಾರ್ಯ ಬಿರುದಾಂಕಿತ ಶ್ರೀ ಕೃಷ್ಣ ದೇವರಾಯ ಈತನ ಕಾಲವನ್ನು ವಿಜಯನಗರದ ಸಮೃದ್ಧಿಯ ಕಾಲ ಮತ್ತು ವಿಜಯನಗರದ ಸುವರ್ಣಯುಗ ಎಂದೂ ಕರೆದಿದ್ದಾರೆ. ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ದಸರಾ ಆಚರಣೆ ಬಹಳಷ್ಟು ಉತ್ತುಂಗದಲ್ಲಿತ್ತು. ಅಲ್ಲದೆ ವಿಜಯನಗರದ ದಸರಾ ಸಡಗರ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲು ವಿದೇಶಿ ಮತ್ತು ದೇಶೀ ಗಣ್ಯರು, ಪ್ರವಾಸಿಗರೆಲ್ಲರೂ ಕೂಡ ಊಹಿಸಲಾಗದಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು.

ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ಪ್ರಾರಂಭವಾಯಿತು. ತದನಂತರದಲ್ಲಿ ಮೈಸೂರಿನ ಒಡೆಯರಾದ ರಾಜಾ ಒಡೆಯರ್ ಶ್ರೀರಂಗಪಟ್ಟಣದಲ್ಲಿ ಮೊದಲ ಬಾರಿಗೆ ಅದ್ದೂರಿ ದಸರಾ ಆಚರಿಸಿದರು. ಮಹಿಷಾಸುರನನ್ನು ಮರ್ದಿಸಿದ ನೆನಪಿಗಾಗಿ ಆಚರಿಸಲ್ಪಡುವ ಹಬ್ಬವೇ ದಸರಾ. ಮೈಸೂರು ದಸರಾ ಹಬ್ಬಕ್ಕೆ ಸುಮಾರು 450 ವರ್ಷಗಳÀ ಭವ್ಯ ಇತಿಹಾಸವಿದೆ. ಕ್ರಿ, ಶ 15ನೇ ಶತಮಾನದಲ್ಲಿ ವಿಜಯನಗರದ ಅರಸರು ಮೊಟ್ಟ ಮೊದಲ ಬಾರಿಗೆ ದಸರಾ ಹಬ್ಬವನ್ನು ಆಚರಿಸಿದ್ದರು. ಇವರ ನಂತರ ದಸರಾ ಆಚರಣೆಯ ಪರಂಪರೆಯನ್ನು ಮುಂದುವರೆಸಿ ಕೊಂಡು ಬಂದವರೇ ಮೈಸೂರಿನ ಯದುವಂಶದ ಒಡೆಯರು.

ಕ್ರಿ, ಶ 1610 ರಲ್ಲಿ ಮೊದಲ ಬಾರಿಗೆ ಮೈಸೂರು ದಸರಾ ಹಬ್ಬವನ್ನು ಅಂದಿನ ಮೈಸೂರಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ಗೌರಿ ಕಡುವೆ ಎಂಬ ಸ್ಥಳದಲ್ಲಿ ಆಚರಿಸಲಾಗಿತ್ತು. ತದನಂತರ ಕ್ರಿ, ಶ 1972 ರಲ್ಲಿ ದಸರಾ ಹಬ್ಬವನ್ನು ಅಧಿಕೃತವಾಗಿ ನಾಡಹಬ್ಬವನ್ನಾಗಿ ಘೋಷಿಸಲಾಯಿತು.

ಮೊಟ್ಟ ಮೊದಲ ಬಾರಿಗೆ ದಸರಾ ಆಚರಿಸಿದ ಮೈಸೂರು ಅರಸರಾದ ರಾಜ ಒಡೆಯರ್ ಕ್ರಿ, ಶ 1578 ರಿಂದ ಕ್ರಿ, ಶ 1617 ರವರೆಗೆ ಮೈಸೂರು ಅರಸರಾಗಿದ್ದರು. ಕ್ರಿ, ಶ 1805 ರಲ್ಲಿ ಮೂರನೇ ಕೃಷ್ಣ ರಾಜ ಒಡೆಯರ್ ವಿಶೇಷ ದರ್ಬಾರಿಗೆ ಚಾಲನೆ ನೀಡಿದ್ದರು. ಅಲ್ಲದೆ ಕ್ರಿ, ಶ 1880 ರಲ್ಲಿ ಮೊದಲ ದಸರಾ ವಸ್ತು ಪ್ರದರ್ಶನವನ್ನು ನಡೆಸಲಾಯಿತು. ಇದಕ್ಕೆ ಚಾಲನೆ ನೀಡಿದವರು ಎಂದರೆ ಹತ್ತನೇ ಚಾಮರಾಜ ಒಡೆಯರ್. ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಆರಾಧನೆಯೊಂದಿಗೆ ಆರಂಭವಾಗುವ ನವರಾತ್ರಿ ಹಾಗೂ ಹತ್ತನೇ ದಿನದಂದು ನಡೆಯುವ ವೈಭವದ ವಿಜಯ ದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದ್ದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕ್ರತಿಕ ಹಿನ್ನೆಲೆ ಇರುವುದು ಇನ್ನಷ್ಟು ವಿಶೇಷ

ಮೈಸೂರು ದಸರ ಎಷ್ಟೊಂದು ಸುಂದರ ಎಂಬ ವಾಣಿಯಂತೆ ಮತ್ತೆ ದಸರಾ ಹೊಸ ಹುರುಪಿನೊಂದಿಗೆ ಮರಳಿ ಬಂದಿದೆ. (ಆದರೆ ಕೋವಿಡ್-19 ಇರುವ ಕಾರಣದಿಂದ ಅದ್ದೂರಿ ದಸರಾ ಹಬ್ಬದ ಆಚರಣೆಯನ್ನು ಕೈಬಿಡಲಾಗಿದೆ). ಹತ್ತು ದಿನಗಳ ಕಾಲ ನಡೆಯುವ ದಸರಾ ಹಬ್ಬದಲ್ಲಿ ನಾಡಿಗೆ ನಾಡೇ ಕುಣಿದು ಸಂಭ್ರಮಿಸುವ ನಾಡ ಹಬ್ಬವಾಗಿ ದಸರಾ ಹಬ್ಬವನ್ನು ಆಚರಿಸುತ್ತಾರೆ. ನವರಾತ್ರಿಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಿದರೂ ನವರಾತ್ರಿ ಸಮಯದಲ್ಲಿ ಮೈಸೂರಿನಲ್ಲಿ ನಡೆಯುವ ದಸರಾ ವೈಭವವೇ ವಿಭಿನ್ನದಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಮೈಸೂರು ದಸರಾವನ್ನು ಹತ್ತು ದಿನಗಳ ಕಾಲ ಸುದೀರ್ಘ ಹಬ್ಬವಾಗಿ ಆಚರಿಸುತ್ತಾರೆ.

ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ಇಷ್ಟೊಂದು ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಸಿಗುವುದು ಬಹು ವಿರಳ. ಮೈಸೂರು ಎಂಬುದು ಮಹಿಷಾಸುರ ಎಂಬ ಅಸುರನ ಹೆಸರಿನಿಂದ ಮೂಲವಾಗಿ ಬಂದಿದೆ. ಇದನ್ನು ಪೂರ್ವ ಕಾಲದಲ್ಲಿ ಮಹಿಷಾಸುರನ ಊರು ಎಂದೂ ಕರೆಯಲಾಗುತ್ತಿತ್ತು. ದೇವಿ ಭಾಗವತದಲ್ಲಿ ಬರುವ ಪೌರಾಣಿಕ ಕಥನಕ್ಕೆ ಮೈಸೂರು ಸಂಬಂಧ ಹೊಂದಿದೆ. ದೇವಿ ಪುರಾಣದಲ್ಲಿ ಇರುವ ಕಥೆಯ ಪ್ರಕಾರ ಅಸುರರ ದೊರೆ, ಕೋಣನ ತಲೆಯುಳ್ಳ ಮಹಿಷಾಸುರ ಎಂಬಾತನು ಮೈಸೂರು ಪಟ್ಟಣವನ್ನು ಆಳುತ್ತಿದ್ದನು. ಮಹಿಷಾಸುರನ ಉಪಟಳ ತಾಳಲಾರದೆ ದೇವಾನುದೇವತೆಗಳು ತಮ್ಮನ್ನು ರಕ್ಷಿಸುವಂತೆ ಪಾರ್ವತೀ ದೇವಿಯ ಮೊರೆ ಹೋದರು. ದೇವಾನುದೇವತೆಗಳ ಮೊರೆಯನ್ನು ಆಲಿಸಿದ ಪಾರ್ವತಿಯು ಚಾಮುಂಡೇಶ್ವರಿಯಾಗಿ ಅವತಾರವೆತ್ತಿ ಮೈಸೂರು ಸಮೀಪದ ಚಾಮುಂಡಿ ಬೆಟ್ಟದ ತುತ್ತ ತುದಿಯಲ್ಲಿ ಅಸುರನನ್ನು ಸಂಹರಿಸಿದಳು. ಇದೇ ಕಾರಣದಿಂದಾಗಿ ಬೆಟ್ಟಕ್ಕೆ ಚಾಮುಂಡಿ ಬೆಟ್ಟ ವೆಂದೂ, ನಗರಕ್ಕೆ ಮೈಸೂರು ಎಂದೂ ಹೆಸರು ಬಂದಿದೆ ಎನ್ನುವುದು ಪ್ರತೀತಿ. ಚಾಮುಂಡೇಶ್ವರಿಯು ಮಹಿಷಾಸುರನನ್ನು ವಧಿಸಿದ ಸತ್ಕಾರ್ಯದ ಸ್ಮರಣಾರ್ಥವಾಗಿ, ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪ್ರತಿವರ್ಷ 10 ದಿನಗಳ ಪ್ರಖ್ಯಾತ ದಸರಾ ಉತ್ಸವವನ್ನು ಮೈಸೂರಿನಲ್ಲಿ ಆಚರಿಸಲಾಗುತ್ತದೆ.

ವಿಜಯನಗರ ಸಾಮ್ರಾಜ್ಯದ ಶಕ್ತಿ ಸಾಮಥ್ರ್ಯ, ಸಂಪತ್ತು, ವೈಭವ- ವೈಭೋಗ, ವೀರತ್ವ-ಧೀರತ್ವ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ ಯ ಶ್ರೀಮಂತಿಕೆಯನ್ನು ತೋರ್ಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಅದರಲ್ಲೂ ಬಹುಮುಖ್ಯವಾಗಿ ವಿಜಯದ ಸಂಕೇತವಾಗಿ ವಿಜಯದಶಮಿ ದಸರಾ ಮಹೋತ್ಸವವನ್ನು ವಿಜಯನಗರದ ಅರಸರು ಆಚರಿಸುತ್ತಿದ್ದರು.

ವಿಜಯನಗರ ಅರಸರ ಸಂಪ್ರದಾಯದಂತೆ ದಸರಾಗೆ ಸಂಬಂಧಿಸಿದ ಎಲ್ಲಾ ರೀತಿಯ ಶಾಸ್ತ್ರ ಹಾಗೂ ವಿಧಿ ವಿಧಾನಗಳನ್ನು ಅತ್ಯಂತ ಶ್ರದ್ಧಾಭಕ್ತಿ ಯಿಂದ ಯದುವಂಶಸ್ಥರೂ ಅನುಸರಿಸಿಕೊಂಡು ಬಂದರು. ಈ ಪ್ರಕಾರದಂತೆ ಅಶ್ವಯುಜ ಶುದ್ಧ ಪ್ರಥಮೆಯಂದು ನವರಾತ್ರಿ ಉತ್ಸವ ಆರಂಭವಾಗಿ ಮಹಾನವಮಿಯ ಕಡೇ ದಿನದವರೆಗೂ ಪ್ರತಿನಿತ್ಯ ಪೂಜೆ ಪುನಸ್ಕಾರ, ಪೂರ್ವಾಹ್ನ ಮತ್ತು ಮಧ್ಯಾಹ್ನ ಸಿಂಹಾಸನಾರೋಹಣ, ಒಡ್ಡೋಲಗ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕೆಂದು ವಿಧೇಯಕವನ್ನೇ ಮಾಡಿ ದಸರಾ ಹಬ್ಬವನ್ನು ಆಚರಣೆಗೆ ತಂದರು. ಕ್ರಿ, ಶ 1799 ರವರೆಗೂ ಅಂದಿನ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ದಸರಾ ನಡೆಯುತ್ತಿತ್ತು.

ಹೈದರಾಲಿ ಮತ್ತು ಟಿಪ್ಪುವಿನ ಆಳ್ವಿಕೆಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಯದುಕುಲದ ತಿಲಕ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ (ಕ್ರಿ, ಶ 1799-1868) ಕಾಲದಲ್ಲಿ ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಲಾಯಿತು. ಅಂದಿನಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಅತೀವ ಕಾಳಜಿಯಿಂದ ಮತ್ತಷ್ಟು ವಿಜೃಂಭಣೆಯೊಂದಿಗೆ ಕ್ರಿ,ಶ 1800ರಲ್ಲಿ ಮೈಸೂರಿನಲ್ಲಿ ದಸರಾ ಪ್ರಾರಂಭವಾಗಿ ಇಂದಿನವರೆಗೂ ಮೈಸೂರು ದಸರಾ ಎಂದು ವಿಶ್ವವಿಖ್ಯಾತಿಯನ್ನು ಪಡೆದುಕೊಳ್ಳುತ್ತಾ ಬಂದಿರುವುದಂತು ಯಾರೂ ಮರೆಯುವಂತಿಲ್ಲ.

-ಸತೀಶ್ ಕುಮಾರ್ ಎ. ಎಸ್.

ಇತಿಹಾಸ ಉಪನ್ಯಾಸಕರು,

ವೀರಾಜಪೇಟೆ.