ವೀರಾಜಪೇಟೆ, ಅ. 19: ಕಾಂಗ್ರೆಸ್ ಕಾರ್ಯಕರ್ತರು ಮುಂಬರುವ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಮುಂದಾಗಬೇಕು ಎಂದು ಕೊಡಗು ಉಸ್ತುವಾರಿ ಕೆಪಿಸಿಸಿಯ ಪಿ.ಎಂ. ಶಾಹಿದ್ ಹೇಳಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಗಣಪತಿ ಅರ್ಕೆಡ್ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿಗಳ ಚುನಾವಣೆಯ ಪೂರ್ವ ಸಿದ್ಧತೆಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ಈ ಹಿಂದಿನ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿಕರಿಗೆ, ಬಡಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಜಾರಿಗೆ ತಂದಿದ್ದರು ಎಂದು ಹೇಳಿದರು. ಕೆಪಿಸಿಸಿಯ ಕೊಡಗು ಜಿಲ್ಲಾ ಮಹಿಳಾ ಘಟಕದ ಉಸ್ತುವಾರಿ ಅಪ್ಫಿ ಮಾತನಾಡಿ ಸಂಘಟನೆಯ ಮೂಲಕ ಪಕ್ಷವನ್ನು ಬಲಪಡಿಸಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಪಕ್ಷದ ಕಾರ್ಯಕರ್ತರು ಭಿನ್ನಾಭಿಪ್ರಾ ಯವನ್ನು ಮರೆತು ಪಕ್ಷದ ಸಂಘಟನೆಗೆ ಮುಂದಾಗಬೇಕು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರು ಬೂತ್ ಮಟ್ಟ ದಿಂದಲೇ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕಾಂಗ್ರೆಸ್ ಸರಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು ಈ ಎಲ್ಲಾ ಯೋಜನೆಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಜನರಿಗೆ ತಿಳಿಸಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ವಹಿಸಿದ್ದರು. ಸೋನಿಯಾ ಬ್ರಿಗೆಡ್‍ನ ಜಾನ್ಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸರಿತಾ ಪೂಣಚ್ಚ, ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್‍ನ ಜಮ್ಮಡ ಸೋಮಣ್ಣ ಅವರು ಉಪಸ್ಥಿತರಿದ್ದರು. ನಗರ ಸಮಿತಿ ಕಾರ್ಯದರ್ಶಿ ಎಂ.ಎಂ. ಶಶಿಧರನ್ ನಿರೂಪಿಸಿದರು.