ಮಡಿಕೇರಿ, ಅ. 20: ಮಡಿಕೇರಿ ನಗರದೊಳಗೆ ಹಾದು ಹೋಗಿರುವ ಮೈಸೂರು ಬಂಟ್ವಾಳ ಹೆದ್ದಾರಿಯ ಚಿಕ್ಕಪೇಟೆಯಲ್ಲಿರುವ ರಸ್ತೆ ವಿಭಜಕ ಅಪಾಯವನ್ನು ಆಹ್ವಾನಿಸುತ್ತಿದೆ. ಪ್ರತಿನಿತ್ಯ ಸಂಜೆಗತ್ತಲಾದಂತೆ ಮೈಸೂರು ಕಡೆಯಿಂದ ಬರುವ ವಾಹನಗಳು ಈ ವಿಭಜಕಕ್ಕೆ ಡಿಕ್ಕಿ ಹೊಡೆದು ಮಗುಚಿಕೊಳ್ಳುವುದು ಸಾಮಾನ್ಯವಾಗಿದೆ.
ದ್ವಿಪಥ ಹೆದ್ದಾರಿಯಲ್ಲಿ ಚಿಕ್ಕಪೇಟೆ ಬಳಿ ರಸ್ತೆ ವಿಭಜಕ ಅಳವಡಿಸಲಾಗಿದೆ. ಗಟ್ಟಿಯಾದ ಕಾಂಕ್ರಿಟ್ ವಿಭಜಕಕ್ಕೆ ಅಳವಡಿಸಿದ್ದ ಪ್ರತಿಫಲಕ (ರಿಫ್ಲೆಕ್ಟರ್)ಕ್ಕೆ ವಾಹನ ಡಿಕ್ಕಿಯಾಗಿ ಇದೀಗ ಅಲ್ಲಿ ಪ್ರತಿಫಲಕ ಇಲ್ಲದಂತಾಗಿದೆ. ಹಾಗಾಗಿ ರಾತ್ರಿ ಹಾಗೂ ಮಳೆ-ಮಂಜು ಮುಸುಕಿದ ಸಂದರ್ಭ ಈ ವಿಭಜಕ ವಾಹನ ಚಾಲಕರಿಗೆ ಗೋಚರಿಸದೆ ನೇರವಾಗಿ ಬಂದು ಡಿಕ್ಕಿ ಹೊಡೆಯುತ್ತಿವೆ. ಆಟೋ ಚಾಲಕರು ಹಾಗೂ ಅಕ್ಕಪಕ್ಕದ ಅಂಗಡಿಯವರಿಗೆ ವಾಹನಗಳನ್ನು ಬದಿಗೆ ಸರಿಸುವುದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವುದೇ ಕಾಯಕವಾಗಿದೆ.
ಸಂಬಂಧಿಸಿದ ಇಲಾಖೆ, ಪೊಲೀಸ್ ಇಲಾಖೆ ಇತ್ತ ಗಮನ ಹರಿಸಿ ಮಾರ್ಗಸೂಚಿ, ಪ್ರತಿಫಲಕಗಳನ್ನು ಅಳವಡಿಸಿ ಬಣ್ಣ ಬಳಿದರೆ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ. -ಸಂತೋಷ್