ಮಡಿಕೇರಿ, ಅ. 19: ‘ಸಂಬಾರ ರಾಣಿ’ ಎಂದೇ ಖ್ಯಾತಿ ಹೊಂದಿರುವ ಔಷಧೀಯ ಗುಣಗಳುಳ್ಳ, ಬಹು ಬೇಡಿಕೆಯ ಏಲಕ್ಕಿ ಬೆಳೆ ವಿನಾಶದತ್ತ ಸಾಗುತ್ತಿರುವಂತೆಯೇ ಇದೀಗ ಮತ್ತೆ ಕೃಷಿಕರು ಏಲಕ್ಕಿ ಬೆಳೆಯುವತ್ತ ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ. ಏಲಕ್ಕಿ ಬೆಳೆಯಿಂದಾಗಿ ಕೈಸುಟ್ಟುಕೊಂಡಿದ್ದರೂ, ಏಲಕ್ಕಿಗೆ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ಕಂಡುಬರುತ್ತಿರುವುದರಿಂದ ಸಂಕಷ್ಟದ ನಡುವೆಯೂ ಮತ್ತೆ ಏಲಕ್ಕಿ ಬೆಳೆಯತ್ತ ಕೃಷಿಕರು ಮುಖ ಮಾಡುತ್ತಿದ್ದಾರೆ.
ಹಿಂದೊಮ್ಮೆ ಜಿಲ್ಲೆಯಲ್ಲಿ ಹೇರಳವಾಗಿ ಏಲಕ್ಕಿ ಬೆಳೆಯಲಾಗುತ್ತಿತ್ತು. ಭತ್ತ ಹಾಗೂ ಏಲಕ್ಕಿಯೇ ಇಲ್ಲಿನ ಪ್ರಮುಖ ಬೆಳೆಯಾಗಿದ್ದವು. ಆದರೆ ಏಲಕ್ಕಿಗೆ ಸರಿಯಾದ ಬೆಲೆ ಸಿಗದೆ, ಅಲ್ಲದೆ ಕಟ್ಟೆರೋಗದಿಂದಾಗಿ ಬೆಳೆಯೂ ನಾಶವಾಗತೊಡಗಿದಾಗ ಅನಿವಾರ್ಯವಾಗಿ ಕೃಷಿಕರು ಏಲಕ್ಕಿ ತೋಟಗಳಲ್ಲಿನ ಮರಗಳನ್ನು ಕಡಿದು ಕಾಫಿ ತೋಟಗಳನ್ನಾಗಿ ಪರಿವರ್ತಿಸಿದರು.
ಕೊಚ್ಚಿ ಹೋಯಿತು...!
ಆದರೂ ಕೆಲವರು ಕೆರೆ, ತೋಡು, ತೊರೆಗಳ ಬೆಳೆ ಹಾಗೂ ನೆರಳು-ಶೀಥ ಪ್ರದೇಶಗಳಲ್ಲಿದ್ದ ಏಲಕ್ಕಿ ತೋಟಗಳನ್ನು ಹಾಗೇ ಉಳಿಸಿಕೊಂಡು ಬಂದಿದ್ದರು. ಆದರೆ, 2018 ರಿಂದೀಚೆ ಉಂಟಾದ ಪ್ರಕೃತಿ ವಿಕೋಪಕ್ಕೆ ಬಹುತೇಕ ಏಲಕ್ಕಿ ತೋಟಗಳೇ ಬಂಲಿಯಾದವು. ತೋಡು ತೊರೆಗಳಿದ್ದ ಸ್ಥಳಗಳಲ್ಲೇ, ಭೂಕುಸಿತ ಉಂಟಾದ್ದರಿಂದ ಏಲಕ್ಕಿ ತೋಟಗಳು ಕೊಚ್ಚಿ ಹೋದವು. ಇದು ಕೃಷಿಕರಿಗೆ ಮತ್ತೊಂದು ಹೊಡೆತ ಬಿದ್ದಂತಾಯಿತು.
ಬೆಲೆ ಏರಿಕೆ: ಈ ನಡುವೆ ಏಲಕ್ಕಿ ಬೆಳೆ ಕಡಿಮೆಯಾಗುತ್ತಿದ್ದಂತೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಸಾಮಾನ್ಯವಾಗಿ ಏಲಕ್ಕಿಗೆ ಬೆಲೆಯೂ ಹೆಚ್ಚಾಯಿತು. ಕಳೆದೆರಡು ವರ್ಷಗಳಿಂದ ಏಲಕ್ಕಿ ಪ್ರತಿ ಕೆ.ಜಿ.ಗೆ ರೂ. 3 ರಿಂದ 4 ಸಾವಿರದವರೆಗೆ ಮಾರಾಟವಾಗುತ್ತಿದೆ. ಇತ್ತ ಬೆಲೆ ಏರುತ್ತಿದ್ದಂತೆ ಕೃಷಿಕರಲ್ಲಿ ಏಲಕ್ಕಿ ಬೆಳೆಯುವ ಆಸಕ್ತಿ ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ರೈತರು ಮತ್ತೆ ಏಲಕ್ಕಿ ತೋಟ ಮಾಡುತ್ತಿರುವುದು ಕಂಡುಬರುತ್ತಿದೆ.
ಕಾಡು-ನೀರಿನಾಂಶವಿರುವ ಜಾಗದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದೆ. ಏಲಕ್ಕಿಗೆ ನೆರಳು ಅತ್ಯಗತ್ಯವಾಗಿದ್ದು, ಮರಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಪಾನುವಾಳ ಇನ್ನಿತರ ನೆರಳು ನೀಡುವ ಮರಗಳನ್ನು ನೆಟ್ಟು ಏಲಕ್ಕಿ ಗಿಡಗಳನ್ನು ನೆಡುತ್ತಿರುವುದು ಕಂಡುಬರುತ್ತಿದೆ.
ಭಾರೀ ಕುಸಿತ: ಭಾರತೀಯ ಸಂಬಾರ ಮಂಡಳಿಯ ಸಮೀಕ್ಷೆ ಪ್ರಕಾರ 2017-18ರ ವರೆಗೆ ಜಿಲ್ಲೆಯಲ್ಲಿ 503.51 ಮೆಟ್ರಿಕ್ ಟನ್ಗಳಷ್ಟು ಏಲಕ್ಕಿ ಬೆಳೆಯಲಾಗುತ್ತಿತ್ತು. 2018-19ರಲ್ಲಿ ಶೇ. 59.51 ರಷ್ಟು ಕುಸಿತಗೊಂಡಿದೆ. ಪ್ರಾಕೃತಿಕ ವಿಕೋಪದಿಂದಾಗಿ ಈ ಕುಸಿತ ಉಂಟಾಗಿದ್ದು, ಕಳೆದ ವರ್ಷ ಮತ್ತೆ 10.36 ರಷ್ಟು ಕುಸಿತವುಂಟಾಗಿದೆ. ಈ ಸಾಲಿನಲ್ಲಿ 6.165 ಹೆಕ್ಟೇರ್ನಲ್ಲಿ 171.13 ಮೆಟ್ರಿಕ್ ಟನ್ಗಳಷ್ಟು ಉತ್ಪಾದನೆ ನಿರೀಕ್ಷಿಸಲಾಗಿದೆ.
ಗಿಡಗಳು ಖಾಲಿ: ಈ ಹಿಂದೆ ನರ್ಸರಿಗಳಲ್ಲಿ ಸಂಬಾರ ಮಂಡಳಿಯ ಸಸ್ಯ ಕ್ಷೇತ್ರಗಳಲ್ಲಿ ಬೆಳೆಯಲಾಗುತ್ತಿದ್ದ ಏಲಕ್ಕಿ ಗಿಡಗಳು ಬೇಡಿಕೆಯಿಲ್ಲದೆ ಅಲ್ಪಪ್ರಮಾಣದಲ್ಲಿ ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಗಿಡಗಳಿಗೆ ಭಾರೀ ಬೇಡಿಕೆ ಕಂಡುಬಂದಿದೆ. ಏಲ್ಲಿಯೂ ಕೂಡ ಏಲಕ್ಕಿ ಗಿಡಗಳು ಲಭ್ಯವಿಲ್ಲ. ರೂ. 10 ರಿಂದ 35-40 ರೂ.ಗಳವರೆಗೆ ಗಿಡಗಳು ಮಾರಾಟವಾಗಿವೆ.
ಸಹಾಯಧನ: ಏಲಕ್ಕಿ ಬೆಳೆ ಪುನಶ್ಚೇತನಗೊಳಿಸಲು ಸಂಬಾರ ಮಂಡಳಿ ವತಿಯಿಂದ ಸಹಾಯಧನ ಕೂಡ ನೀಡಲಾಗುತ್ತಿದೆ. ಒಂದು ಹೆಕ್ಟೇರ್ಗೆ ಶೇ. 50 ರಂತೆ ಸಹಾಯಧನ ನೀಡಲಾಗುತ್ತಿದೆ. ಕೂಲಿ ವೆಚ್ಚ, ನಿರ್ವಹಣೆ ದುಬಾರಿಯಾಗಿರುವುದರಿಂದ ಮೊದಲೇ ಸಂಕಷ್ಟದಲ್ಲಿರುವ ಏಲಕ್ಕಿ ಬೆಳೆಗಾರರಿಗೆ ಇದು ಒಂದಿಷ್ಟು ವರದಾನವಾಗಲಿದೆ. ಆದರೆ, ಪ್ರತಿಕೂಲ ಹವಮಾನ ವಾತಾವರಣದಿಂದಾಗಿ ನೆಟ್ಟ ಗಿಡಗಳು ಮೇಲೇಳುವುದೇ ತ್ರಾಸದಾಯಕವಾಗಿದೆ. ಏಲಕ್ಕಿಗೆ ಉತ್ತಮ ದರ, ಪ್ರೋತ್ಸಾಹ ದೊರೆತಲ್ಲಿ ಕೊಡಗು ಮತ್ತೆ ‘ಸಂಬಾರ ರಾಣಿ’ಯ ತವರೂರು ಎನಿಸಿಕೊಳ್ಳಬಹುದು.