ಕುಶಾಲನಗರ, ಅ. 19: ಅಖಿಲ ಭಾರತ ಸನ್ಯಾಸಿಗಳ ಸಂಘದ 10ನೇ ಕಾವೇರಿ ನದಿ ಜಾಗೃತಿ ತೀರ್ಥಯಾತ್ರಾ ತಂಡ ತಾ. 20 ರಂದು (ಇಂದು) ಜಿಲ್ಲೆಗೆ ಆಗಮಿಸಲಿದೆ. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಹಯೋಗದೊಂದಿಗೆ ನಡೆಯಲಿರುವ ಯಾತ್ರಾ ತಂಡ ತಲಕಾವೇರಿಯಿಂದ ಪೂಂಪ್‍ಹಾರ್ ತನಕ ಒಂದು ತಿಂಗಳ ಕಾಲ ಸಂಚರಿಸಲಿದ್ದು, ಈ ಸಂದರ್ಭ ನದಿ ತಟದ ಜನತೆಗೆ ನದಿ ಸಂರಕ್ಷಣೆ ಬಗ್ಗೆ ಅರಿವು ಜಾಗೃತಿ ಮೂಡಿಸಲಿದೆ. ಸನ್ಯಾಸಿಗಳ ಸಂಘದ ಸ್ಥಾಪಕ ಉಪಾಧ್ಯಕ್ಷ ಶ್ರೀ ರಮಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ 10 ಮಂದಿ ಸಾಧುಸಂತರ ತಂಡ ಇಂದು ಕುಶಾಲನಗರ ಮೂಲಕ ಸಂಚರಿಸಿ ತಲಕಾವೇರಿಗೆ ತೆರಳಲಿದೆ. ದಿನಾಂಕ 21 ರಂದು ಬೆಳಿಗ್ಗೆ 8.30ಕ್ಕೆ ತಲಕಾವೇರಿಯಿಂದ ತೀರ್ಥ ಸಂಗ್ರಹಿಸಿ ಪೂಜೆ ಸಲ್ಲಿಸಿದ ನಂತರ ಯಾತ್ರೆಗೆ ಚಾಲನೆ ದೊರೆಯಲಿದೆ.

ಕೋವಿಡ್-19 ಹಿನ್ನೆಲೆ ಈ ಬಾರಿ ಒಂದು ದಿನ ಮಾತ್ರ ಜಿಲ್ಲೆಯ ಮೂಲಕ ಈ ಸಾಧುಸಂತರ ತಂಡ ತೆರಳಲಿದ್ದು ಯಾತ್ರಾ ಸಂದರ್ಭ ಪಾಲ್ಗೊಳ್ಳುವ ಸಾಧುಸಂತರು ಕೊರೊನಾ ಪರೀಕ್ಷೆ ಪ್ರಮಾಣ ಪತ್ರದೊಂದಿಗೆ ಆಗಮಿಸಲಿದ್ದಾರೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.