ಸೋಮವಾರಪೇಟೆ, ಅ. 19: ಪ್ರತಿವರ್ಷ ಜನೋತ್ಸವದಂತೆ ನಡೆಯುತ್ತಿದ್ದ ಆಯುಧ ಪೂಜೋತ್ಸವ ಸಮಾರಂಭವನ್ನು ಈ ಬಾರಿ ಕೋವಿಡ್ ಹಿನ್ನೆಲೆ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಎ.ಆರ್. ಭರತ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ಸಾಂಕೇತಿಕವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ತಾ. 25 ರಂದು ಬೆಳಿಗ್ಗೆ 7.30ಕ್ಕೆ ಸಂಘದ ಕಚೇರಿಯಲ್ಲಿ ಪೂಜೆ ಸಲ್ಲಿಸಲಾಗುವುದು. ಬೆಳಿಗ್ಗೆ 8.30ಕ್ಕೆ ಪಟ್ಟಣದಲ್ಲಿರುವ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು. ನಂತರ ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ವಿ. ಬಾಲಕೃಷ್ಣ ಪೂಜಾರಿ, ಕಾರ್ಯದರ್ಶಿ ಬಿ.ಎನ್. ರಂಗಸ್ವಾಮಿ, ಸಹ ಕಾರ್ಯದರ್ಶಿ ಎಂ.ಕೆ. ರವಿ, ಖಜಾಂಚಿ ಎಸ್.ಆರ್. ಪ್ರಸನ್ನ ಉಪಸ್ಥಿತರಿದ್ದರು.