ಗೋಣಿಕೊಪ್ಪ ವರದಿ, ಅ. 20 : ಸೋಮವಾರಪೇಟೆ ತಾಲೂಕಿನ ಕೊಡಗರಹಳ್ಳಿಯಲ್ಲಿ ನಡೆದ ಬೀಟೆ ಮರ ಕಳ್ಳತನ ಪ್ರಕರಣದಲ್ಲಿ ಅರಣ್ಯ ಇಲಾಖೆ ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ರೈತ ಸಂಘ-ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಆಗ್ರಹಿಸಿದ್ದಾರೆ.

ತಾ. 13 ರ ತಡರಾತ್ರಿ ರೈತ ದೀಪಕ್ ಬಸವರಾಜ್ ಎಂಬವರ ತೋಟದಲ್ಲಿ ಮರ ಕಳ್ಳತನ ಯತ್ನದ ಆರೋಪಿಗಳಿಗೆ ಅರಣ್ಯ ಇಲಾಖೆ ಸಹಕಾರ ನೀಡುತ್ತಿದೆ ಎಂದು ಆರೋಪಿಸಿರುವ ಇವರು, ವೈಜ್ಞಾನಿಕ ತನಿಖೆ ನಡೆಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ರೈತ ಸಂಘ ಕಾರ್ಯಕರ್ತರುಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾಗ 5 ಜೊತೆ ಚಪ್ಪಲಿ, 6 ಜೊತೆ ಬಟ್ಟೆ ಅಲ್ಲಿತ್ತು. ಇದನ್ನು ತನಿಖೆಗಾಗಿ ಅರಣ್ಯ ಇಲಾಖೆ ವಶಕ್ಕೆ ಪಡೆದಿಲ್ಲ. ಸ್ಥಳದಲ್ಲೇ ಬಿಟ್ಟು ಹೋಗಿರುವ ಅರಣ್ಯ ಅಧಿಕಾರಿಗಳು ಸಾಕ್ಷಿ ನಾಶಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವೈಜ್ಞಾನಿಕವಾದ ತನಿಖೆಗೆ ಚಪ್ಪಲಿ, ಬಟ್ಟೆ ಸಾಕ್ಷ್ಯವಾಗುತ್ತದೆ ಎಂದು ಅರಿತು ಸಿಸಿಎಫ್ ಹಿರಲಾಲ್ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಿದೆ. ತಪ್ಪಿದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಕಾನೂನು ಸಲಹೆಗಾರ ಕೆ. ಬಿ. ಹೇಮಚಂದ್ರ ಮಾತನಾಡಿ, ಮರಗಳ್ಳತನ ಯತ್ನ ಸಂದರ್ಭ ಬಳಸಿರುವ ಕಾರು ಮಾಲೀಕನ ಮರ ಮಿಲ್ಲನ್ನು ಇನ್ನೂ ವಶಕ್ಕೆ ಪಡೆದಿಲ್ಲ. ಮರಗಳ್ಳರು ತೋಟಕ್ಕೆ ನುಗ್ಗಿ ಕಳ್ಳತನ ಕೃತ್ಯಗಳನ್ನು ನಡೆಸುತ್ತಿ ದ್ದಾರೆ. ಇದರಿಂದ ರೈತರಿಗೆ ಸುರಕ್ಷತೆ ಇಲ್ಲದಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರಭಾವಕ್ಕೆ ಒಳಗಾಗಿದ್ದು, 10 ದಿನದ ಒಳಗೆ ಅರೋಪಿಗಳನ್ನು ಬಂಧಿಸಬೇಕು. ಹೋರಾಟದ ಮೂಲಕ ಜನಪರವಾಗಿ ಸಂಘ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಬಾಳಲೆ ಹೋಬಳಿ ಅಧ್ಯಕ್ಷ ಎಂ. ಟಿ. ಮಾಚಯ್ಯ, ರೈತ ಮುಖಂಡರಾದ ಪುಚ್ಚಿಮಾಡ ಶಿಲ್ಪ ಗೋಷ್ಠಿಯಲ್ಲಿದ್ದರು.