ಮಡಿಕೇರಿ, ಅ. 19: ಕೊಡಗು ಜಿಲ್ಲೆಯಲ್ಲಿ ವರ್ಷಗಳು ಉರುಳಿದಂತೆ ಕಾಲಚಕ್ರದ ಸುಳಿಯಲ್ಲಿ ಸಿಲುಕಿರುವ ಅನ್ನದಾತ ರೈತ ತನ್ನ ಕಾಯಕದಿಂದ ವಿಮುಖನಾಗಿರುವ ಕಾರಣ, ಸಾಕಷ್ಟು ಭತ್ತದ ಗದ್ದೆಗಳು ಪಾಳು ಬೀಳುವಂತಾಗಿ, 2018 ರಿಂದ ಎದುರಾಗಿರುವ ಭೂಕುಸಿತದ ಪರಿಣಾಮ 4 ಸಾವಿರ ಹೆಕ್ಟೇರ್ ಭತ್ತದ ಗದ್ದೆಯಲ್ಲಿ ಹೂಳು ತುಂಬಿಕೊಂಡು ಕೃಷಿ ಅಸಾಧ್ಯವಾಗಿದೆ. ಇನ್ನೊಂದೆಡೆ ಗದ್ದೆ ಬಯಲು ನಿವೇಶನವಾಗಿ ಪರಿವರ್ತನೆ ಆಗುತ್ತಿರುವದು ಹಾಗೂ ಶುಂಠಿ ಮತ್ತು ತೋಟಗಾರಿಕಾ ಬೆಳೆಗಳ ಉದ್ದೇಶಕ್ಕಾಗಿ 3713 ಹೆಕ್ಟೇರ್ ಕೃಷಿಗೆ ಅಲಭ್ಯವಾಗಿರುವ ಅಂಶ ಬೆಳಕಿಗೆ ಬಂದಿದೆ.

ಒಂದೊಮ್ಮೆ ಕೃಷಿ ಭೂಮಿಯನ್ನು ಹಾಳು ಬಿಡುವದು ಅವಲಕ್ಷಣ ಅಥವಾ ಮರ್ಯಾದೆಯೆಂದು ರೈತರು ಪರಿಗಣಿಸುತ್ತಿದ್ದ ಕಾಲವಿತ್ತು; ಆದರೆ ಈಗ ಪರಿಸ್ಥಿತಿ ಬದಲಾಗಿದೆ, ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ರೈತ ಕುಟುಂಬಗಳು ಕಾರ್ಮಿಕರ ಸಮಸ್ಯೆಗೂ ಸಿಲುಕಿರುವ ಕಾರಣ ಗದ್ದೆಗಳಲ್ಲಿ ಭತ್ತ ಬೆಳೆಯುವದರಿಂದ ಲಾಭವಿಲ್ಲವೆಂದು ನಿರ್ಧರಿಸುವ ಮಾತು ಕೇಳಿಬರತೊಡಗಿದೆ.

ಹೂಳೆತ್ತದೆ ಹೊಡೆತ : ಇನ್ನೊಂದೆಡೆ 2018ರ ಪ್ರಾಕೃತಿಕ ವಿಕೋಪದಿಂದ ಬಹಳಷ್ಟು ಕಡೆಗಳಲ್ಲಿ ಮರಳು, ಮರ ಇತ್ಯಾದಿ ಭತ್ತದ ಗದ್ದೆಗಳಲ್ಲಿ ತುಂಬಿಕೊಂಡು ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಅಸಡ್ಡೆ ತೋರಿರುವ ಪರಿಣಾಮ ತಮ್ಮ ತಮ್ಮ ಗದ್ದೆಗಳ ಕೃಷಿಗೆ ಹೊಡೆತವನ್ನು ರೈತರು ಅನುಭವಿಸುತ್ತಿದ್ದಾರೆ.

ಶುಂಠಿ - ಬಾಳೆ ಮೊರೆ : ಇಂತಹ ಕಡೆಗಳಲ್ಲಿ ಭತ್ತ ಬೆಳೆಯಲಾರದ ರೈತರು ಅನಿವಾರ್ಯ ಪರಿಸ್ಥಿತಿಯಲ್ಲಿ ಶುಂಠಿ, ಬಾಳೆ, ಕಾಫಿ ತೋಟ ಮಾಡಲು ಪ್ರಯತ್ನದಲ್ಲಿದ್ದು, ಅನ್ನದಾತನು ಪರಿಸ್ಥಿತಿಗೆ ಹೊಂದಿಕೊಳ್ಳಲು ಮುಂದಾ ಗಿದ್ದಾನೆ. ಈ ಎಲ್ಲಾ ಕಾರಣದಿಂದ ಕೃಷಿ ತಜ್ಞರ ಪ್ರಕಾರ ಜಿಲ್ಲೆಯಲ್ಲಿ ಶೇ. 22.36 ರಷ್ಟು ಕೃಷಿ ಚಟುವಟಿಕೆಯಲ್ಲಿ ಹಿನ್ನೆಡೆ ಉಂಟಾಗಿದೆ.

ತಾಲೂಕುವಾರು ಹಿನ್ನೆಡೆ : ಹೀಗಾಗಿ ಪ್ರಸಕ್ತ ಸೆಪ್ಟೆಂಬರ್ ಅಂತ್ಯಕ್ಕೆ ಮಡಿಕೇರಿ ತಾಲೂಕಿನಲ್ಲಿ 6500 ಹೆಕ್ಟೇರ್ ಭತ್ತದ ನಾಟಿ ಪೈಕಿ 5065 ಹೆಕ್ಟೇರ್ ಮಾತ್ರ ಕೃಷಿ ಸಾಧನೆ ಗೋಚರಿಸಿದೆ. ಅಂತೆಯೇ ಸೋಮವಾರಪೇಟೆ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಗುರಿ ಪೈಕಿ 9210 ಹೆಕ್ಟೇರ್‍ನಷ್ಟು ರೈತ ಕಾಯಕದಲ್ಲಿ ಮುನ್ನಡೆ ಕಂಡುಕೊಂಡಿದ್ದು, ಈ ಪೈಕಿ 3050 ಹೆಕ್ಟೇರ್ ಮುಸುಕಿನ ಜೋಳ ಬೆಳೆದಿರುವದು ಗೋಚರಿಸಿದೆ. ಇನ್ನು ವೀರಾಜಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಭತ್ತದ ನಾಟಿ ಗುರಿ ಹೊಂದಿದ್ದ ಕೃಷಿ ಇಲಾಖೆ ಲೆಕ್ಕಾಚಾರದಂತೆ 9462 ಹೆಕ್ಟೇರ್ ನಾಟಿಯ ಪ್ರಗತಿ ಗೋಚರಿಸಿದೆ. ಹೀಗಾಗಿ ಪ್ರಸಕ್ತ ಮುಂಗಾರು ನಾಟಿಯಿಂದ

(ಮೊದಲ ಪುಟದಿಂದ) ಸರಾಸರಿ 77.64 ರಷ್ಟು ಶೇಕಡ ಸಾಧನೆಯಾಗಿದೆ ಎಂದು ಕೃಷಿ ಇಲಾಖೆಯು ಅಂಕಿ ಅಂಶ ನೀಡಿದೆ.

ಇಷ್ಟು ಮಾತ್ರವಲ್ಲದೆ ಕೊಡಗಿನಲ್ಲಿ ಈ ಹಿಂದೆ ಹವಾಮಾನಕ್ಕೆ ತಕ್ಕಂತೆ ರೈತರು ಬೆಳೆಯುತ್ತಿದ್ದ ರಾಗಿ, ತಂಬಾಕು, ಎಣ್ಣೆ, ಕಾಳುಗಳು, ದ್ವಿದಳ ಧಾನ್ಯಗಳು ಕೃಷಿ ಮಾಡದಿರುವದು ದೃಢಪಟ್ಟಿದೆ. ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿ ಚಟುವಟಿಕೆಗೆ ಸಾಕಷ್ಟು ಉತ್ತೇಜನ ನೀಡುತ್ತಿದ್ದರೂ ರೈತ ಮಾತ್ರ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೆ ಸಾಕಷ್ಟು ಬವಣೆಯನ್ನು ಅನುಭವಿಸುವಂತಾಗಿದೆ ಎನ್ನುವದು ವಾಸ್ತವ.