ಪೆÇನ್ನಂಪೇಟೆ, ಅ. 20: ಕೊಡಗಿನ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳುವುದು ಬೆಳೆಗಾರರಿಗೆ ಬಹುದೊಡ್ಡ ಸವಾಲಾಗಿದೆ. ಹಲವು ವರ್ಷಗಳಿಂದ ಕಾಡಾನೆಗಳ ದಾಳಿಯಿಂದ ರೈತರು ಕಂಗಾಲಾಗಿದ್ದಾರೆ. ಈಚೆಗಂತು ಕಾಡಾನೆಗಳ ದಾಳಿ ಮತ್ತಷ್ಟು ಹೆಚ್ಚಿರುವುದು ರೈತರ ನಿದ್ದೆಗೆಡಿಸಿದೆ. ಆದ್ದರಿಂದ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಇಂದಿನ ತುರ್ತು ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮುಕೋಂಡ ವಿಜು ಸುಬ್ರಮಣಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಕ್ಷಿಣ ಕೊಡಗಿನ ಪಾಲಿಬೆಟ್ಟ, ಸಿದ್ದಾಪುರ, ಹುಂಡಿ, ಚೆನ್ನಯ್ಯನಕೋಟೆ, ಸೋಮವಾರಪೇಟೆ ತಾಲೂಕಿನ ಹಲವು ಭಾಗಗಳು ಸೇರಿದಂತೆ ಕೊಡಗಿನ 40ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ಕಾಡಾನೆ ಹಾವಳಿಗಳಿಂದ ಮುಕ್ತಿ ನೀಡಿ ಕೊಡಗಿನ ಬೆಳೆಗಾರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕಾಡು ಪ್ರಾಣಿಗಳ ಉಪಟಳ ತಾಳಲಾರದೆ ಬಹುತೇಕ ಕೊಡಗಿನ ರೈತರು ಭತ್ತದ ಕೃಷಿ ಕೈಬಿಟ್ಟು, ನೂರಾರು ಎಕರೆ ಭೂಮಿಯನ್ನು ಪಾಳು ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಕೂಡ ಕಾಡಾನೆ ಸ್ಥಳಾಂತರದ ಪ್ರಯತ್ನ ಮಾಡುತ್ತಿಲ್ಲ. ಕೇವಲ ಪಟಾಕಿ, ಅಶ್ರುವಾಯು ಸಿಡಿಸಿ ಕಾಡಾನೆ ಓಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕೊಡಗಿನ ಬೆಳೆಗಾರರು ಕಷ್ಟಪಟ್ಟು ಕೃಷಿ ಮಾಡಿದರೆ ಕಾಡಾನೆ ದಾಳಿ ಮಾಡಿ ಕೃಷಿಕರ ಅನ್ನವನ್ನೇ ಕಿತ್ತುಕೊಳ್ಳುತ್ತದೆ. ಅರಣ್ಯ ಇಲಾಖೆಯ ಅತ್ಯಲ್ಪ ಪರಿಹಾರವು ರೈತರ ಬದುಕನ್ನು ಹಸನುಗೊಳಿಸದು ಎಂದು ದೂರಿದ್ದಾರೆ. ಕೂಡಲೇ ಸರ್ಕಾರ ಮತ್ತು ಇದಕ್ಕೆ ಸಂಬಂಧಪಟ್ಟ ಸಚಿವರುಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಬೆಳೆಗಾರರ ಪರವಾಗಿ ಸರಕಾರವನ್ನು ಮತ್ತು ಸಂಬಂಧಿಸಿದ ಇಲಾಖೆಯನ್ನು ತಾವು ಆಗ್ರಹಿಸುತ್ತಿದ್ದು, ಕಾಡಾನೆ ಸೇರಿದಂತೆ ವನ್ಯಜೀವಿಗಳ ಉಪಟಳದಿಂದ ಕೊಡಗನ್ನು ರಕ್ಷಿಸುವಂತೆ ಮನವಿ ಮಾಡುವುದಾಗಿ ಹೇಳಿಕೆಯಲ್ಲಿ ವಿಜು ಸುಬ್ರಮಣಿ ತಿಳಿಸಿದ್ದಾರೆ.