ಗೋಣಿಕೊಪ್ಪ ವರದಿ, ಅ. 18 : ಕೊರೊನಾ ತಡೆಗೆ ಪುತ್ತರಿ ಫಾರ್ಮರ್ಸ್ ಪ್ರೊಡ್ಯೂಸ್ ಕಂಪೆನಿ ಲಿಮಿಟೆಡ್ ವತಿಯಿಂದ 8 ದೇವಸ್ಥಾನಗಳಿಗೆ ತೀರ್ಥ ಹಂಚುವ ಯಂತ್ರ (ಆಟೋಮೆಟಿಕ್ ತೀರ್ಥ ಡಿಸ್ಪೆನ್ಸಿಂಗ್ ಮಷಿನ್) ಉಚಿತವಾಗಿ ವಿತರಿಸಲಾಯಿತು. ಕಂಪೆನಿ ಲಿಮಿಟೆಡ್ ಅಧ್ಯಕ್ಷ ಕಳ್ಳಂಗಡ ಪಿ. ಸುಬ್ಬಯ್ಯ ಮುಂದಾಳತ್ವದಲ್ಲಿ ಜಿಲ್ಲೆಯ ಸುಮಾರು 8 ದೇವಸ್ಥಾನಗಳಿಗೆ ಸುಮಾರು 60 ಸಾವಿರ ವೆಚ್ಚದಲ್ಲಿ ವಿತರಿಸಲಾಗಿದೆ.

ಕಕ್ಕಬ್ಬೆ ಪಾಡಿ ಇಗ್ಗುತ್ತಪ್ಪ ದೇವಸ್ಥಾನ, ಭಾಗಮಂಡಲ ಭಗಂಡೇಶ್ವರ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನ, ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನ, ಹೈಸೊಡ್ಲೂರು ಮಹಾದೇವ ದೇವಸ್ಥಾನ, ಪೇರ್ಮಾಡ್ ಈಶ್ವರ ದೇವಸ್ಥಾನ, ವೀರಾಜಪೇಟೆ ಗಣಪತಿ ದೇವಸ್ಥಾನಗಳಿಗೆ ಈಗಾಗಲೇ ನೀಡಲಾಗಿದೆ. ಅಲ್ಲಿನ ಆಡಳಿತ ಮಂಡಳಿ, ಅರ್ಚಕರ ಸಮ್ಮುಖದಲ್ಲಿ ವಿತರಿಸಲಾಗಿದೆ.

ದೇವಸ್ಥಾನಗಳಿಗೆ ಬರುವ ಭಕ್ತರು, ಅರ್ಚಕರ ನಡುವೆ ಕೊರೊನಾ ಹರಡುವಿಕೆ ನಿಯಂತ್ರಿಸಲು ಈ ಯಂತ್ರವನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಇದರ ಸಾಧಕ-ಬಾಧಕ ಅರಿತು ಮುಂದಿನ ದಿನಗಳಲ್ಲಿ ಮತ್ತಷ್ಟು ವಿತರಣೆ ಮಾಡುವ ಯೋಜನೆ ಇಟ್ಟುಕೊಳ್ಳಲಾಗಿದೆ ಎಂದು ಪುತ್ತರಿ ಫಾರ್ಮರ್ಸ್ ಪ್ರೊಡ್ಯೂಸ್ ಕಂಪೆನಿ ಲಿಮಿಟೆಡ್ ಸಿಇಒ ಹೊಟ್ಟೇಂಗಡ ರಾಣಾ ಪೊನ್ನಣ್ಣ ತಿಳಿಸಿದ್ದಾರೆ.

ಬ್ಯಾಟರಿ ಚಾಲಿತ ಆಟೋಮೆಟಿಕ್ ತೀರ್ಥ ಡಿಸ್ಪೆನ್ಸಿಂಗ್ ಮಷಿನ್ ಸೆನ್ಸಾರ್ ತಂತ್ರಜ್ಞಾನ ಹೊಂದಿದ್ದು, ಯಂತ್ರದ ಎದುರು ಕೈ ತೋರಿ ನಿಂತರೆ ತೀರ್ಥ ಅದಾಗಿಯೇ ಕೈಗೆ ಬೀಳುತ್ತದೆ. 7 ಲೀಟರ್ ಟ್ಯಾಂಕ್ ಸಾಮಥ್ರ್ಯ ಹೊಂದಿದ್ದು, ನಿತ್ಯ 1500 ಭಕ್ತರಿಗೆ ತೀರ್ಥ ವಿತರಣೆ ಮಾಡುವಷ್ಟು ಪ್ರತೀ ಭಕ್ತರಿಗೆ 5 ಎಂ. ಎಲ್. ತೀರ್ಥವನ್ನು ಮಾಡಲು ಸಹಕಾರಿಯಾಗಲಿದೆ.