ಗೋಣಿಕೊಪ್ಪ ವರದಿ, ಅ. 18; ಕಾವೇರಿ ತೀರ್ಥೋದ್ಭವದ ಮಾರನೇ ದಿನ ಆಚರಿಸಲ್ಪಡುವ ಈ ನಮ್ಮೆ ಮೂಲಕ ದಕ್ಷಿಣ ಕೊಡಗಿನ ಬೋಡ್ನಮ್ಮೆ ಆಚರಣೆಗೆ ಚಾಲನೆ ಪಡೆದುಕೊಂಡಿದೆ.
ಗ್ರಾಮಸ್ಥರ ಸಂಭ್ರಮದ ನಡುವೆ ಕುಂದ ಬೋಡ್ನಮ್ಮೆ ಭಾನುವಾರ ಜರುಗುವ ಮೂಲಕ ಈ ಬಾರಿಯ ಬೋಡ್ನಮ್ಮೆಗೆ ಚಾಲನೆ ದೊರೆ ತಂತಾಗಿದೆ. ಕುಂದ ಗ್ರಾಮದಲ್ಲಿರುವ ಕುಂದ ಬೆಟ್ಟದಲ್ಲಿ ಪೂಜಾ ಭಕ್ತಿಯ ಆಚರಣೆ ನಡೆಯಿತು. ಆಚರಣೆಗೆ ವಿವಿಧ ಕಟ್ಟುಪಾಡುಗಳ ಮೂಲಕ ತೀರ್ಥ ಪೂಜೆ ಮಾಡಲಾಯಿತು. ಸಾಂಪ್ರದಾಯಿಕ ವಾಲಗದೊಂದಿಗೆ ಗ್ರಾಮಸ್ಥರು ಸಂಭ್ರಮಿಸಿದರು. ಬೋಡ್ನಮ್ಮೆಯ ಜನಪದ ಹಾಡುಗಳ ಮೂಲಕ ದೇವರ ಸ್ಮರಣೆ ಮಾಡಿದರು.
ಬಿದಿರಿನಿಂದ ತಯಾರಿಸಿದ ಕೃತಕ ಕುದುರೆ ಹೊತ್ತು ಕುಣಿದು ಸಂಭ್ರಮಿಸಿದರು. ಮುಕ್ಕಾಟಿ ಬಾಣೆಯಲ್ಲಿ ಒಂದಾಗಿ ಕುಣಿದು ಆಚರಿಸಿದರು. ಗ್ರಾಮದ ಪುರುಷರು, ಮಹಿಳೆಯರು ಮಕ್ಕಳು ಪಾಲ್ಗೊಂಡರು.
ಮನೆಯಪಂಡ ಕುಟುಂಬ ದೇವತಕ್ಕರಾಗಿ, ಸಣ್ಣುವಂಡ ಕುಟುಂಬ ಭಂಡಾರ ತಕ್ಕರಾಗಿ, ಜವಬ್ದಾರಿ ನಿಭಾಯಿಸಿದರು. ಸ್ಥಳೀಯರು ಆಚರಣೆಯಲ್ಲಿ ಪಾಲ್ಗೊಂಡರು.
ಆಚರಣೆ ಬಗ್ಗೆ : ದಕ್ಷಿಣ ಕೊಡಗಿನಲ್ಲಿ ನಡೆಯುವ ಬೋಡ್ನಮ್ಮೆಗೆ ಕುಂದ ಬೆಟ್ಟದಲ್ಲಿ ಕಾವೇರಿ ತೀರ್ಥೋದ್ಭವದ ನಂತರದ ದಿನಗಳಲ್ಲಿ ತೀರ್ಥಪೂಜೆ ಆಚರಣೆ ಯೊಂದಿಗೆ ಚಾಲನೆ ನೀಡಲಾಗುತ್ತಿದೆ. ಈ ಆಚರಣೆಯು ಕುಂದ ಬೋಡ್ನಮ್ಮೆ ಎಂದು ಆರಂಭ ಗೊಳ್ಳುತ್ತದೆ. ಕಂಡಂಗಾಲ ಗ್ರಾಮದಲ್ಲಿ ಜೂನ್ ತಿಂಗಳಿನಲ್ಲಿ ಆಚರಿಸಲ್ಪಡುವ ಪಾರಣ ಬೋಡ್ನಮ್ಮೆ ಮೂಲಕ ಆಚರಣೆಗೆ ತೆರೆ ಎಳೆದುಕೊಳ್ಳುತ್ತದೆ. ಇದರ ನಡುವೆ ದ. ಕೊಡಗಿನ ಹಲವು ಗ್ರಾಮಗಳಲ್ಲಿ ಬೋಡ್ನಮ್ಮೆ ಗ್ರಾಮದ ಆಚರಣೆಯಂತೆ ನಡೆಯುತ್ತದೆ.