ಮಡಿಕೇರಿ, ಅ. 18: ತಲಕಾವೇರಿ ತೀರ್ಥೋದ್ಭವ ಬಳಿಕ ಮರು ದಿನವಾದ ಇಂದು ನಸುಕಿನಲ್ಲಿ ಮಾತೆಯನ್ನು ಕುಲದೇವಿಯಾಗಿ ಆರಾಧಿಸುವ ಭಕ್ತರು ಮನೆ ಮನೆಗಳಲ್ಲಿ ಕಣಿಪೂಜೆಯೊಂದಿಗೆ ಶ್ರೀ ಕಾವೇರಿ ಮಾತೆಯನ್ನು ಪೂಜಿಸಿದರು.

ಪ್ರಸಕ್ತ ವರ್ಷ ಕೊರೊನಾ ಕಾರಣದಿಂದಾಗಿ ಹಲವಾರು ಭಕ್ತಾದಿಗಳಿಗೆ ತೀರ್ಥೋದ್ಭವ ಸಂದರ್ಭ ತಲಕಾವೇರಿಗೆ ತೆರಳಲು ಅವಕಾಶವೂ ಇರಲಿಲ್ಲ. ಈ ಕಾರಣದಿಂದಾಗಿ ವರ್ಷಂಪ್ರತಿಯಾಗಿ ಆಚರಿಸಲ್ಪಡುವ ಈ ಪದ್ಧತಿ ಈ ಬಾರಿ ಇನ್ನಷ್ಟು ಪ್ರಾಮುಖ್ಯತೆಯೊಂದಿಗೆ ಜರುಗಿತು.

ಕಾವೇರಿಯ ಪ್ರತಿರೂಪವನ್ನು ತಮ್ಮದೇ ಕಲ್ಪನೆಯಂತೆ ಅವರವರ ಶಕ್ತ್ಸಾನುಸಾರವಾಗಿ ಪ್ರತಿಷ್ಠಾಪಿಸಿ ಇದನ್ನು ಹೂವು, ಹಣ್ಣು ಸೇರಿದಂತೆ ಮತ್ತಿತರ ಪೂಜಾ ಸಾಮಗ್ರಿಗಳೊಂದಿಗೆ ಪವಿತ್ರ ತೀರ್ಥವನ್ನೂ ಇಟ್ಟು ತೀರ್ಥ ಪೂಜೆಯನ್ನು ನೆರವೇರಿಸಲಾಯಿತು. ಮನೆ ಮನೆಗಳಲ್ಲಿ ಅವರವರು ಪೂಜೆ - ಪ್ರಾರ್ಥನೆ, ಗುರು - ಹಿರಿಯರಿಗೆ ನಮಿಸುವದರ ಮೂಲಕ ಕಾರ್ಯಕ್ರಮ ಆಚರಿಸಿದರೆ, ವಿವಿಧ ಸಮಾಜ, ಸಂಘ - ಸಂಸ್ಥೆಗಳಲ್ಲೂ ಸಾಮೂಹಿಕ ಕಾರ್ಯಕ್ರಮ ಜರುಗಿತು.

ತೀರ್ಥೋದ್ಭವ ಘಟಿಸಿದ ಬಳಿಕ ಸೂರ್ಯೋದಯಕ್ಕೂ ಮುನ್ನ ಕಣಿಪೂಜೆ ನಡೆಸುವದು ಸಂಪ್ರದಾಯ. ಪ್ರಸಕ್ತ ವರ್ಷ ಅ. 17 ರಂದು ಬೆಳಿಗ್ಗೆ 7ರ ಬಳಿಕ ತೀರ್ಥೋದ್ಭವವಾದ ಹಿನ್ನೆಲೆಯಲ್ಲಿ ತಾ. 18ರ ಮುಂಜಾನೆ ಕಣಿಪೂಜೆ ಆರಾಧನೆ ಜರುಗಿತು. ಕಾವೇರಿ ಪ್ರತಿರೂಪವನ್ನು ಬಿದಿರಿನ ಆಕೃತಿ ಮೂಲಕ ಅಥವಾ ತೆಂಗಿನ ಕಾಯಿ, ಸೌತೆಕಾಯಿ, ಅಕ್ಕಿ, ಕಲಶದಂತಹ ಸಾಮಗ್ರಿಗಳು, ಕೆಂಪುವಸ್ತ್ರ ಸಹಿತವಾಗಿ ಶೃಂಗರಿಸಲಾಗುತ್ತದೆ.

ಇದಕ್ಕೆ ಪತ್ತಾಕ್ ಸಹಿತವಾಗಿ ಇತರ ಆಭರಣಗಳನ್ನೂ ತೊಡಿಸಲಾಗುತ್ತದೆ. ಬಳಿಕ ಕಾವೇರಿ ಮಾತೆ ಹಾಗೂ ನೆಲ್ಲಕ್ಕಿಯಲ್ಲಿ ಅಕ್ಕಿ ಹಾಕಿ ನಮಿಸುವದರೊಂದಿಗೆ ಕಿರಿಯರು ಹಿರಿಯರ ಕಾಲು ಹಿಡಿದು ಆಶೀರ್ವಾದವನ್ನು ಪಡೆಯುವದು, ಗುರು ಕಾರೋಣರ ನೆಲೆ, ಐನ್‍ಮನೆ ಕೈಮಡಗಳಿಗೆ ತೆರಳಿ ನಮಿಸುವದು ಸಂಪ್ರದಾಯವಾಗಿದೆ. ಇದಕ್ಕೂ ಮುನ್ನ ‘ಬೊತ್ತ್‍ಪುಟ್ಟ್’ ಇಡುವ ಕಾರ್ಯವೂ ಜರುಗಿತು. ಜಿಲ್ಲೆ ಮಾತ್ರವಲ್ಲದೆ ಹೊರಗಿನಲ್ಲಿರುವ ಜಿಲ್ಲೆಯ ಭಕ್ತಾದಿಗಳೂ ಆಯಾ ಸಮಾಜ ಸಂಘ - ಸಂಸ್ಥೆಗಳಲ್ಲಿ ಈ ಕಾರ್ಯವನ್ನು ಆಚರಿಸಿದರು. ಬೆಂಗಳೂರು, ಮೈಸೂರು ಸೇರಿದಂತೆ ಇತರ ಕೊಡವ ಸಮಾಜಗಳಲ್ಲೂ ಕಣಿ ಪೂಜೆಯನ್ನು ನೆರವೇರಿಸಲಾಯಿತು.